ಜಾನುವಾರು ವ್ಯಾಪಾರಿ ಇದ್ರಿಸ್ ಪಾಷಾ ಕೊಲೆ ಪ್ರಕರಣ ಆರೋಪಿಯಾಗಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರು ಪೊಲೀಸರು ರೌಡಿಶೀಟ್ ತೆರೆಯುವ ಸಾಧ್ಯತೆ ಇದೆ.
ದೊಂಬಿ, ಕೊಲೆ, ಹಲ್ಲೆ, ಪ್ರಾಣ ಬೆದರಿಕೆ ಮತ್ತು ಇನ್ನಿತರೆ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ನಿಮ್ಮ ಮೇಲೆ ಏಕೆ ರೌಡಿಪಟ್ಟಿ ತೆರೆಯಬಾರದು ಎಂಬುದಕ್ಕೆ ಕೂಡಲೇ ನನಗೆ ವಿವರಣೆ ಸಲ್ಲಿಸಬಹುದು. ಇಲ್ಲವಾದಲ್ಲಿ ನಿಮ್ಮ ವಿವರಣೆ ಏನೂ ಇಲ್ಲವೆಂದು ಪರಿಗಣಿಸಿ ರೌಡಿಪಟ್ಟಿ ತೆರೆಯಲು ಕರ್ನಾಟಕ ಪೊಲೀಸ್ ಮ್ಯಾನ್ಯುಯಲ್ ಭಾಗ-2ರಲ್ಲಿ ಹೇಳಲಾಗಿರುವ ಆದೇಶ ಸಂಖ್ಯೆ 1059(2)ರಲ್ಲಿ ಪ್ರದತ್ತವಾಗಿ ರೌಡಿ ಹಾಳೆಯನ್ನು ತೆರೆಯಲಾಗುವುದು
ಎಂದು ಚಿಕ್ಕಪೇಟೆ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಪುನೀತ್ ಕೆರೆಹಳ್ಳಿಗೆ ಪೊಲೀಸ್ ತಿಳುವಳಿಕೆ ಪತ್ರವನ್ನು ರವಾನಿಸಿದ್ದಾರೆ.
ಬೆಂಗಳೂರು ನಗರದ ಜೆಪಿ ನಗರ ನಿವಾಸಿಯಾಗಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಬೇಗೂರು ಪೊಲೀಸ್ ಠಾಣೆ, ಎಲೆಕ್ಟ್ರಾನಿಕ್ ಪೊಲೀಸ್ ಠಾಣೆ, ಚಾಮರಾಜಪೇಟೆ ಪೊಲೀಸ್ ಠಾಣೆ, ವಿಜಯನಗರ ಜಿಲ್ಲೆಯ ಹಂಪಿ ಟೂರಿಸಂ ಪೊಲೀಸ್ ಠಾಣೆ, ರಾಮನಗರ ಜಿಲ್ಲೆಯ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಎಸ್ಸಿಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲೂ ಎಫ್ಐಆರ್ ದಾಖಲಾಗಿದೆ.
ಸದಸ್ಯ ನ್ಯಾಯಾಲಯದಿಂದ ಜಾಮೀನು ಪಡೆದು ನ್ಯಾಯಾಂಗ ಬಂಧನದಿಂದ ಬಿಡುಗಡೆ ಆಗಿರುವ ನಿಮ್ಮ ವಿರುದ್ಧ ರೌಡಿಪಟ್ಟಿ ತೆರೆಯಲು ಅನುಮತಿ ನೀಡುವಂತೆ ಚಾಮರಾಜಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಅವರು ಕಚೇರಿಗೆ ವರದಿ ಸಲ್ಲಿಸಿದ್ದಾರೆ
ಎಂದು ಸಹಾಯಕ ಪೊಲೀಸ್ ಆಯುಕ್ತರು ಕೆರೆಹಳ್ಳಿಗೆ ಕಳುಹಿಸಿರುವ ಪೊಲೀಸ್ ತಿಳುವಳಿಕೆ ಪತ್ರದಲ್ಲಿ ಹೇಳಿದ್ದಾರೆ.
ರೌಡಿಪಟ್ಟಿ ತೆರೆಯುವ ಮೊದಲು ಸಂಬಂಧಿತ ವ್ಯಕ್ತಿಗೆ ನೋಟಿಸ್ ನೀಡಬೇಕು, ಒಂದು ವೇಳೆ ರೌಡಿಶೀಟ್ ತೆರೆದು ಆ ವ್ಯಕ್ತಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ ಎಂದು ಕರ್ನಾಟಕ ಹೈಕೋರ್ಟ್ನ ಏಕಸದಸ್ಯ ಪೀಠ ಕಳೆದ ವರ್ಷ ಮಾರ್ಗಸೂಚಿ ಹೊರಡಿಸಿತ್ತು.
ರೌಡಿಪಟ್ಟಿಗೆ ಸೇರಿದ್ರೆ:
ಒಂದು ವೇಳೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ವ್ಯಕ್ತಿಯೊಬ್ಬ ರೌಡಿ ಪಟ್ಟಿ ಸೇರಿದರೆ ಆತನನ್ನು ಬಳಿಕ ರೌಡಿ ಎಂದೇ ಕರೆಯಲಾಗುತ್ತದೆ.
ರೌಡಿಪಟ್ಟಿಯಲ್ಲಿ ವ್ಯಕ್ತಿಯ ಮೇಲೆ ಪೊಲೀಸರು ನಿರಂತರ ನಿಗಾ ಇಟ್ಟಿರುತ್ತಾರೆ. ಹಬ್ಬಗಳು, ಗಣ್ಯರ ಭೇಟಿ, ಚುನಾವಣೆ, ಪ್ರತಿಭಟನೆ ಇತ್ಯಾದಿ ವೇಳೆ ಪೊಲೀಸರಿಗೆ ಇಂತಹ ರೌಡಿಗಳನ್ನು ಕರೆದು ಎಚ್ಚರಿಕೆ ಕೊಡುವ ಅವಕಾಶ ಇದೆ ಅಥವಾ ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೂ ಪಡೆಯಬಹುದು. ರೌಡಿಶೀಟರ್ಗಳನ್ನು ಅಗತ್ಯಬಿದ್ದಲ್ಲಿ ಜಿಲ್ಲೆಯನ್ನೇ ಬಿಟ್ಟು ಹೋಗುವಂತೆ ಗಡೀಪಾರು ಮಾಡಲು ಕಾನೂನು ಅವಕಾಶಗಳಿವೆ.
ADVERTISEMENT
ADVERTISEMENT