ದನದ ವ್ಯಾಪಾರಿ ಹತ್ಯೆ ಪ್ರಕರಣದ ಆರೋಪಿ ಪುನೀತ್ ಕೆರೆಹಳ್ಳಿಯನ್ನು ಚಕ್ರವರ್ತಿ ಸೂಲಿಬೆಲೆ ತಮ್ಮ ಮನೆಗೆ ಕರೆಸಿ ಊಟ ಹಾಕಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರಲ್ಲಿ ಇದ್ರೀಶ್ ಪಾಷಾ ಎಂಬ ದನದ ವ್ಯಾಪಾರಿಯ ಕೊಲೆ ಕೇಸ್ನಲ್ಲಿ ಕೆರೆಹಳ್ಳಿ ಮತ್ತು ಆತನ ಮೂವರು ಸಹಚರರನ್ನು ಬಂಧಿಸಲಾಗಿತ್ತು.
ಬಂಧಿತರಿಗೆ ಕರ್ನಾಟಕ ಹೈಕೋರ್ಟ್ನ ರಜಾಕಾಲದ ನ್ಯಾಯಪೀಠದ ನ್ಯಾಯಮೂರ್ತಿ ಎಂ ಜಿ ಉಮಾ ಅವರು ಜಾಮೀನು ಮಂಜೂರು ಮಾಡಿದ್ದರು.
ಜಾಮೀನು ಪಡೆದ ಬಳಿಕ ಆರೋಪಿಗಳು ಚಕ್ರವರ್ತಿ ಸೂಲಿಬೆಲೆ ಅವರ ಮನೆಗೆ ತೆರಳಿದ್ದಾರೆ, ಕೊಲೆ ಆರೋಪಿಗಳಿಗೆ ಸೂಲಿಬೆಲೆ ಊಟ ಬಡಿಸಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲೂ ಸೂಲಿಬೆಲೆ ಬರೆದುಕೊಂಡಿದ್ದಾರೆ.
ಪುನೀತ್ ಕೆರೆಹಳ್ಳಿ ಮತ್ತವನ ಮಿತ್ರರು ನಿನ್ನೆ ಕುಟೀರಕ್ಕೆ ಬಂದಿದ್ದರು. ಎಲ್ಲರೂ ಜೊತೆಕೂತು ಊಟ ಮಾಡಿದಾಗಲೇ ತೃಪ್ತಿ. ಹೋರಾಟದ ಹಾದಿಯಲ್ಲಿ ಏಳು-ಬೀಳುಗಳು ಸಹಜ. ವಿರೋಧಿಗಳಿಗಂತೂ ಕೊರತೆಯಿಲ್ಲ. ಆದರೆ ಪುನೀತ ಮತ್ತವನ ಮಿತ್ರರು ಬಲವಾಗಿಯೇ ಇದ್ದಾರೆ. ಹೆಮ್ಮೆ ಎನಿಸಿತು.
ಇವರೆಲ್ಲರನ್ನೂ ಜಾಮೀನಿನ ಮೇಲೆ ಹೊರತರುವಲ್ಲಿ ಅರುಣ್ ಶ್ಯಾಮ್ ಮತ್ತವರ ತಂಡ ವಿಶೇಷವಾಗಿ ಶ್ರಮಿಸಿತು. ಕಷ್ಟಕಾಲದಲ್ಲಿ ನೆರವಾದವರು ಶಾಶ್ವತವಾಗಿ ನೆನಪಿರುತ್ತಾರಂತೆ. ಅರುಣ್ ಶ್ಯಾಮ್ ಅದೆಷ್ಟು ಬಾರಿ ಇಂತಹ ಸಂದರ್ಭಗಳಲ್ಲಿ ನಮ್ಮ ಬೆಂಬಲಕ್ಕೆ ನಿಂತಿದ್ದಾರೆಂದು ಹೇಳುವುದು ಕಷ್ಟ. ಭಗವಂತ ಅವರಿಗೆ ಹೆಚ್ಚಿನ ಆಯಸ್ಸು, ಆರೋಗ್ಯ ಮತ್ತು ಕೀರ್ತಿಯನ್ನು ಕೊಡಲೆಂದಷ್ಟೆ ನಾನು ಹಾರೈಸುವ, ನೀವೂ ಕೂಡ ಜೊತೆಗೂಡಿಕೊಳ್ಳಿ.
ಈ ಹಿಂದೆಯೂ ಕೊಲೆ ಆರೋಪಿಯನ್ನು ಸ್ವಾಗತಿಸಿದ್ದ ಸೂಲಿಬೆಲೆ:
ಅಂದಹಾಗೆ ಈ ರೀತಿ ಕೊಲೆ ಆರೋಪಿಗಳನ್ನು ಚಕ್ರವರ್ತಿ ಸೂಲಿಬೆಲೆ ಸ್ವಾಗತಿಸುತ್ತಿರುವುದು ಇದೇ ಮೊದಲಲ್ಲ. 2019ರಲ್ಲಿ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಆರೋಪಿ ನರೇಶ್ ಶೆಣೈ ಜೈಲಿನಿಂದ ಬಿಡುಗಡೆ ಆಗುವಾಗ ಜೈಲಿನೊಳಗೆ ಹೋಗಿ ಸ್ವಾಗತಿಸಿ ಕರೆ ತಂದಿದ್ದರು.
ADVERTISEMENT
ADVERTISEMENT