ADVERTISEMENT
ರಾಹುಲ್ ಗಾಂಧಿ ವಿರುದ್ಧ ನೀಡಲಾಗಿದ್ದ ದೋಷಿ ಎಂಬ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಈ ಮೂಲಕ ರಾಹುಲ್ ಗಾಂಧಿ ಅವರ ಅನರ್ಹತೆ ತತ್ಕ್ಷಣವೇ ರದ್ದಾಗಲಿದೆ. ಈ ಮೂಲಕ ರಾಹುಲ್ ಗಾಂಧಿ ಅವರು ಮತ್ತೆ ಲೋಕಸಭೆಯ ಕಾರ್ಯಕಲಾಪದಲ್ಲಿ ಭಾಗವಹಿಸಬಹುದಾಗಿದೆ.
ಅರ್ಜಿದಾರರಿಗೆ (ರಾಹುಲ್ ಗಾಂಧಿ) ಅವರಿಗೆ ಗರಿಷ್ಠ 2 ವರ್ಷಗಳ ಶಿಕ್ಷೆ ಕೊಟ್ಟಿರುವ ಬಗ್ಗೆ ವಿಚಾರಣಾ ನ್ಯಾಯಾಲಯ (ಸೂರತ್ ನ್ಯಾಯಾಲಯ) ಮತ್ತು ತೀರ್ಪು ಎತ್ತಿ ಹಿಡಿದ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಎಲ್ಲೂ ಕಾರಣಗಳನ್ನು ಹೇಳಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಜನಪ್ರತಿನಿಧಿ ಕಾಯ್ದೆಯ ನಿಯಮದ ಪ್ರಕಾರ ಒಂದು ವೇಳೆ ದೋಷಿ ಎಂದು ನೀಡಲಾಗಿರುವ ತೀರ್ಪಿಗೆ ಒಂದು ವೇಳೆ ತಡೆಯಾಜ್ಞೆ ಸಿಕ್ಕರೆ ಆ ತಡೆಯಾಜ್ಞೆ ಸಿಕ್ಕ ಕ್ಷಣದಿಂದಲೇ ಅನರ್ಹತೆ ರದ್ದಾಗಲಿದೆ.
ಅನರ್ಹತೆಯಿಂದ ಅರ್ಜಿದಾರ (ರಾಹುಲ್ ಗಾಂಧಿ) ಅವರ ಹಕ್ಕಿನ ಮೇಲಾಗಿರುವ ಪರಿಣಾಮ ಮತ್ತು ಅವರನ್ನು ಚುನಾಯಿಸಿದ ಕ್ಷೇತ್ರದ ಮತದಾರರ ಮೇಲಾಗಿರುವ ಪರಿಣಾಮಗಳನ್ನು ಗಮನಿಸಿ ದೋಷಿ ಎಂಬ ತೀರ್ಪಿಗೆ ತಡೆ ನೀಡುತ್ತಿರುವುದಾಗಿ ನ್ಯಾಯಮೂರ್ತಿ ಬಿ ಆರ್ ಗವಾಯಿ, ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠ ಹೇಳಿದೆ.
ADVERTISEMENT