ADVERTISEMENT
ADVERTISEMENT
ವರದಿ: ಅಕ್ಷಯ್ ಕುಮಾರ್, ಮುಖ್ಯ ಸಂಪಾದಕರು
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ತಕ್ಷಣವೇ ಅನರ್ಹರಾಗ್ತಾರಾ..? ಕಾನೂನು ಏನು ಹೇಳುತ್ತದೆ..?
1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8ರ ಉಪ ಕಲಂ 3ರಡಿಯಲ್ಲಿ:
2 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಒಳಗಾದ ಶಾಸಕ ಅಥವಾ ಸಂಸದರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬಹುದು. ಜೈಲು ಶಿಕ್ಷೆ ಪೂರೈಸಿ ಬಿಡುಗಡೆ ಆದ ಬಳಿಕ ಮುಂದಿನ 6 ವರ್ಷಗಳವರೆಗೆ ಚುನಾವಣೆಗೆ ನಿಲ್ಲದಂತೆ ನಿರ್ಬಂಧ ಹೇರಬಹುದು.
2013ರಲ್ಲಿ ಸುಪ್ರಿಂಕೋರ್ಟ್ ಐತಿಹಾಸಿಕ ತೀರ್ಪು:
2013ರಲ್ಲಿ ಲಿಲ್ಲಿ ಥಾಮಸ್ v/s ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಎ ಜೆ ಪಟ್ನಾಯಕ್ ಮತ್ತು ಎಸ್ ಜೆ ಮುಖ್ಯೋಪಾಧ್ಯಾಯ ಅವರಿದ್ದ ದ್ವಿಸದದ್ಯ ಪೀಠ ಐತಿಹಾಸಿಕ ತೀರ್ಪು ನೀಡಿತ್ತು.
2 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಒಳಗಾದ ಶಾಸಕರು ಅಥವಾ ಸಂಸದರು ಶಿಕ್ಷೆ ಪ್ರಮಾಣ ಪ್ರಕಟವಾದ ದಿನದಿಂದಲೇ ಅನರ್ಹರಾಗ್ತಾರೆ.
ಈ ತೀರ್ಪಿನ ಪ್ರಕಾರ ರಾಹುಲ್ ಗಾಂಧಿ ಅವರು ಇವತ್ತಿನಿಂದಲೇ ಸಂಸದ ಸ್ಥಾನ ಕಳೆದುಕೊಳ್ಳುತ್ತಾರೆ, ಅನರ್ಹರಾಗ್ತಾರೆ.
ಅನರ್ಹತೆಯಿಂದ ತಾತ್ಕಾಲಿಕ ವಿನಾಯ್ತಿ:
1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8ರ ಉಪ ಕಲಂ 4ರ ಅಡಿಯಲ್ಲಿ 2 ವರ್ಷಕ್ಕಿಂತ ಹೆಚ್ಚು ಅವಧಿಗೆ ಶಿಕ್ಷೆಗೊಳಗಾದ ಶಾಸಕರು ಅಥವಾ ಸಂಸದರನ್ನು ಮೂರು ತಿಂಗಳವರೆಗೆ ಅನರ್ಹಗೊಳಿಸುವಂತಿಲ್ಲ.
2013ರ ಪರಿಣಾಮ:
ಆದರೆ 2013ರಲ್ಲಿ ಲಿಲ್ಲಿ ಥಾಮಸ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಉಪ ಕಲಂ 4ನ್ನು ರದ್ದುಪಡಿಸಿತು.
ಸುಗ್ರೀವಾಜ್ಞೆ ಹರಿದು ಹಾಕಿದ್ದ ರಾಹುಲ್:
ಸುಪ್ರೀಂಕೋರ್ಟ್ನ 2013ರ ತೀರ್ಪಿನ ವಿರುದ್ಧ ಮತ್ತು ಉಪ ಕಲಂ 4ನ್ನು ಮತ್ತೆ ಜನಪ್ರತಿನಿಧಿ ಕಾಯ್ದೆಯಲ್ಲಿ ಸೇರ್ಪಡೆಗೊಳಿಸುವ ಸಲುವಾಗಿ ಆಗ ಯುಪಿಎ ಸರ್ಕಾರ ಸುಗ್ರೀವಾಜ್ಞೆಯನ್ನು ಜಾರಿಗೆ ತರಲು ಯತ್ನಿಸಿತು. ಆದರೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಆ ಸುಗ್ರೀವಾಜ್ಞೆಯನ್ನು ನಾನ್ಸೆನ್ಸ್ ಎಂದು ಹೇಳಿ ಹರಿದು ಹಾಕಿದರು.
2018ರ ಸುಪ್ರೀಂಕೋರ್ಟ್ ತೀರ್ಪು:
2018ರಲ್ಲಿ ಲೋಕಪ್ರಹಾರಿ ಪ್ರಕರಣದಲ್ಲಿ ಈಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿರುವ ಡಿ ವೈ ಚಂದ್ರಚೂಡ್ ಅವರಿದ್ದ ಮೂವರು ನ್ಯಾಯಮೂರ್ತಿಗಳ ಪೀಠ:
ಒಂದು ವೇಳೆ ಶಾಸಕರು ಮತ್ತು ಸಂಸದರಿಗೆ ಶಿಕ್ಷೆ ಪ್ರಮಾಣ ಪ್ರಕಟವಾಗಿ ಆ ಶಿಕ್ಷೆಯನ್ನು ಕೋರ್ಟ್ ಅಮಾನತಿನಲ್ಲಿಟ್ಟರೆ ಆಗ ಶಿಕ್ಷೆ ಅಮಾನತಿನಲ್ಲಿರುವ ಅವಧಿಗೆ ಶಿಕ್ಷೆಗೊಳಗಾದ ಅಂತಹ ಶಾಸಕರು ಅಥವಾ ಸಂಸದರನ್ನು ಅನರ್ಹಗೊಳಿಸುವಂತಿಲ್ಲ ಎಂದು ತೀರ್ಪು ನೀಡಿತ್ತು.