ಭಾರತ್ ಜೋಡೋ ಯಾತ್ರೆಯ ಯಶಸ್ಸಿನ ಬಳಿಕ ಪೂರ್ವ ಮತ್ತು ಪಶ್ಚಿಮ ಭಾರತದಲ್ಲಿಯೂ ಯಾತ್ರೆ ನಡೆಸುವುದಾಗಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜನವರಿ 14ರಿಂದ ತಮ್ಮ ಎರಡನೇ ಹಂತದ ಯಾತ್ರೆಯನ್ನು ಆರಂಭಿಸಲಿದ್ದಾರೆ.
ಮಣಿಪುರದಿಂದ ಮುಂಬೈವರೆಗೆ 6,200 ಕಿಮೀ ಮಾರ್ಗದಲ್ಲಿ ‘ಭಾರತ್ ನ್ಯಾಯ ಯಾತ್ರೆ’ಯನ್ನು ರಾಹುಲ್ ಗಾಂಧಿ ನಡೆಸಲಿದ್ದು, ಲೋಕಸಭಾ ಚುನಾವಣೆ ದೃಷ್ಟಿಯಿಂದಾಗಿ ಈ ಯಾತ್ರೆ ಗಮನ ಸೆಳೆದಿದೆ.
ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಛತ್ತೀಸ್ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿದಂತೆ 14 ರಾಜ್ಯಗಳ 85ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ‘ಭಾರತ ನ್ಯಾಯ ಯಾತ್ರೆ’ ಸಾಗಲಿದೆ.
ಕೆಲವೊಂದು ಸ್ಥಳಗಳಲ್ಲಿ ಮಾತ್ರ ರಾಹುಲ್ ಗಾಂಧಿ ಹಾಗೂ ಇತರೆ ನಾಯಕರು ಪಾದಯಾತ್ರೆ ಮಾಡಲಿದ್ದಾರೆ. ಗರಿಷ್ಠ ಜನರ ಪಾಲ್ಗೊಳ್ಳಲು ಅನುವಾಗುವಂತೆ ಕಾಲ್ನಡಿಗೆಯಲ್ಲಿ ಯಾತ್ರೆ ಸಾಗಲಿದೆ. ಯಾತ್ರೆಯ ಬಹುತೇಕ ಭಾಗ ಬಸ್ ಪ್ರಯಾಣ ಇರಲಿದ್ದು, ಕೆಲವೊಂದು ಸ್ಥಳಗಳಲ್ಲಿ ಮಾತ್ರ ರಾಹುಲ್ ಗಾಂಧಿ ಮತ್ತಿತರ ನಾಯಕರು ಪಾದಯಾತ್ರೆ ಕೈಗೊಳ್ಳಲಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ, ಅಂದರೆ ಮಾರ್ಚ್ 20ರಂದು ಪಾದಯಾತ್ರೆ ಅಂತ್ಯಗೊಳ್ಳಲಿದೆ.
ಕಾಂಗ್ರೆಸ್ ನ ಈ ಭಾರತ ನ್ಯಾಯ ಯಾತ್ರೆ, ದೇಶದ ಜನರಿಗೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯ ದೊರಕಿಸಿಕೊಡುವ ಸಲುವಾಗಿದೆ ಕೈಗೊಳ್ಳಲಾಗಿದೆ. ಹಿಂಸಾಚಾರ ಪೀಡಿತ ಮಣಿಪುರದಿಂದ ಯಾತ್ರೆ ಆರಂಭಿಸುತ್ತಿರುವ ಕಾಂಗ್ರೆಸ್, ಜನರ ದುಮ್ಮಾನಗಳನ್ನು ದೂರ ಮಾಡುವ ಪ್ರಕ್ರಿಯೆಯೊಂದಿಗೆ ಯಾತ್ರೆ ಆರಂಭಿಸಲು ಬಯಸಿದೆ ಅಂತ ತಿಳಿಸಿದೆ.
ಕಳೆದ ಬಾರಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಐದು ತಿಂಗಳ ಕಾಲ ನಡೆಸಿದ್ದ ಕಾಂಗ್ರೆಸ್, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿನ ಪಕ್ಷದ ಗೆಲುವಿಗೆ ಭಾರತ ಐಕ್ಯತಾ ಯಾತ್ರೆ ಕಾರಣ ಎಂದು ಹೇಳಿಕೊಂಡಿತ್ತು. ಹೀಗಾಗಿ ಈ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಈ ಯಾತ್ರೆ ಕೂಡ ನೆರವಾಗಲಿದೆ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.