ಬೆಂಗಳೂರು: ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ರೈಲ್ವೆ ಇಲಾಖೆ ಹಲವಾರು ಜನಸ್ನೇಹಿ ಕ್ರಮಗಳನ್ನು ಕೈಗೊಂಡಿದೆ. ರಾತ್ರಿ 10 ಗಂಟೆಯ ನಂತರ ಪ್ರಯಾಣಿಕರ ಮೊಬೈಲ್ ಸೌಂಡ್ ಜಾಸ್ತಿ ಮಾಡಿದರೆ, ಅನಾವಶ್ಯಕವಾಗಿ ರೈಲಿನಲ್ಲಿ ಲೈಟ್ಸ್ ಆನ್ ಮಾಡಿದರೆ, ಜೋರಾಗಿ ಮಾತನಾಡಿದರೆ.. ಅಂಥವರ ವಿರುದ್ಧ ರೈಲ್ವೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಸುರಕ್ಷಿತ ಹಾಗೂ ನೆಮ್ಮದಿಯ ಪ್ರಯಾಣಕ್ಕೆ ನೈರುತ್ಯ ರೈಲ್ವೆ ವಲಯ ಬೆಂಗಳೂರು ವಿಭಾಗವು ಹಲವು ಕ್ರಮ ಕೈಗೊಂಡಿದೆ.
ಇನ್ಮುಂದೆ ರೈಲಿನಲ್ಲಿ ರಾತ್ರಿ ವೇಳೆ ಪ್ರಯಾಣ ಮಾಡೋರು ರಾತ್ರಿ 10 ಗಂಟೆಯ ನಂತರ ಫೋನ್ ಸೌಂಡ್ ಜಾಸ್ತಿ ಮಾಡಿದ್ರೆ, ಲೈಟ್ಸ್ ಆನ್ ಮಾಡಿದ್ರೆ, ಫೋನಲ್ಲಿ ಮಾತನಾಡ್ತಿದ್ರೆ, ಹರಟೆ ಹೊಡಿತಿದ್ರೆ, ಪ್ರಯಾಣಿಕರಿಗೆ ಕಿರಿಕಿರಿ ಮಾಡಿದ್ರೆ, ರೈಲ್ವೆ ಅಧಿಕಾರಿಗಳು ಅಂಥವರ ವಿರುದ್ಧ ಕೇಸ್ ಹಾಕಲಿದ್ದಾರೆ. ಸುರಕ್ಷತೆಯ ಪ್ರಯಾಣಕ್ಕೆ ಭಂಗ ಉಂಟು ಮಾಡುವವರನ್ನ ಪತ್ತೆ ಹಚ್ಚೋಕೆ ಸೌತ್ ವೆಸ್ಟರ್ನ್ ರೈಲ್ವೆ ಅಧಿಕಾರಿಗಳು ರೈಲ್ವೆ ಪ್ರಯಾಣದುದ್ದಕ್ಕೂ ರಿಸರ್ವೇಶನ್ ಬೋಗಿಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ರೈಲ್ವೆ ಮದದ್ ಎಂಬ ಸೇವೆಯ ಮೂಲಕ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗ್ತಿದೆ.
ಸುರಕ್ಷತೆಗೆ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಹೆಚ್ಚಿನವರು ರೈಲು ಪ್ರಯಾಣ ಆಯ್ಕೆ ಮಾಡಿಕೊಳ್ತಾರೆ. ಇದೀಗಾ ನೈರುತ್ಯ ರೈಲ್ವೆ ವಲಯ ಬೆಂಗಳೂರು ವಿಭಾಗದ ಅಧಿಕಾರಿಗಳು ಮತ್ತಷ್ಟು ಜನಸ್ನೇಹಿಯಾಗಿದ್ದಾರೆ. ಭಾರತೀಯ ರೈಲ್ವೆ ಇಲಾಖೆಯ “ರೈಲು ಮದದ್” ಸೇವೆಯ ಮೂಲಕ ಪ್ರಯಾಣಿಕ ಸಮಸ್ಯೆಗಳಿಗೆ ಕ್ವಿಕ್ ರೆಸ್ಪಾನ್ಸ್ ಮಾಡ್ತಿದ್ದಾರೆ. ರಿಸರ್ವೆಶನ್ ಕೋಚ್ನಲ್ಲಿ ಪ್ರಯಾಣ ಮಾಡುವ ರೋಗಿಗಳ ಮೇಲೆ, ರೈಲ್ವೆ ಅಧಿಕಾರಿಗಳು ನಿಗಾವಹಿಸಿ, ರೋಗಿಗಳಿಗೆ ಔಷಧಿ, ಪ್ರಾಥಮಿಕ ಚಿಕಿತ್ಸೆ ಹಾಗೂ ವಿಕಲಚೇತನರಿಗೆ ವ್ಹೀಲ್ಚೇರ್ ಸೇರಿದಂತೆ ಇತರೆ ಆರೋಗ್ಯ ಸೇವೆಯನ್ನ ನೀಡ್ತಿದ್ದಾರೆ. ರೋಗಿಗಳಿಗೆ ಆರೋಗ್ಯ ಸೇವೆಯನ್ನ ನೀಡಿ, ಅವರು ಇಳಿಯುವ ನಿಲ್ದಾಣದ ವರೆಗೂ ಫಾಲೋಆಪ್ನಲ್ಲಿರುತ್ತಾರೆ. ಹೀಗೆ ರಿಸರ್ವೆಶನ್ ಕೋಚ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆ, ಭದ್ರತೆಗಾಗಿ ಪ್ರತಿ ಬೋಗಿಗಳಲ್ಲಿ ಆರ್ಪಿಎಫ್ ತಂಡ, ಟಿಟಿಗಳು, ಸೂಪರಿಡೆಂಟ್ಗಳು ರೌಂಡ್ಸ್ ಮಾಡುತ್ತಿರುತ್ತಾರೆ.
ರೈಲ್ವೆ ಮದಾದ್ ಎಂಬುದು, ರೈಲ್ವೆ ಪ್ರಯಾಣಿಕರ ಕುಂದುಕೊರತೆ ಹಾಗೂ ದೂರುಗಳನ್ನ ಸಲ್ಲಿಸಲು ಇರುವ ಒಂದು ವೆಬ್ ಅಥವಾ ಆ್ಯಪ್. ಇಲ್ಲಿ ತಾವು ಪ್ರಯಾಣಿಸುವ ರೈಲಿನಲ್ಲಿ ಯಾವುದೇ ಸಮಸ್ಯೆಗಳಿದ್ದರೂ, ಈ ವೆಬ್ ಪೇಜ್ನಲ್ಲಿ ದೂರು ಸಲ್ಲಿಸಿದರೆ ತಕ್ಷಣಕ್ಕೆ ಪ್ರಯಾಣಿಕನಿರುವ ಬೋಗಿಗೆ ರೈಲ್ವೆ ಅಧಿಕಾರಿಗಳು ಬರ್ತಾರೆ. ಹೀಗೆ ಸೌತ್ ವೆಸ್ಟರ್ನ್ ರೈಲ್ವೆಗೆ ಪ್ರತಿ ತಿಂಗಳು 7 ರಿಂದ 8 ಸಾವಿರ ದೂರುಗಳು ಬರುತ್ತಿವೆ. ಬಂದ ದೂರುಗಳನ್ನ ಖುದ್ದು ಆರ್ಪಿಎಫ್ ಟೀಂ ಹಾಗೂ ಟಿಕೆಟ್ ಇನ್ಸ್ಪೆಕ್ಟರ್ಗಳೇ ಪರಿಶೀಲಿಸಿ, ಪರಿಹರಿಸುತ್ತಿದ್ದಾರೆ.