ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಅಸಾನಿ ಚಂಡಮಾರುತ ಕ್ಷೀಣವಾಗಿದ್ದರೂ ರಾಜ್ಯದಲ್ಲಿ ಇನ್ನೂ ಐದು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ಎರಡು ವಾರಗಳಿಂದ ರಾಜ್ಯದ ಒಳನಾಡಿನಲ್ಲಿ ಬೀಳುತ್ತಿರುವ ಮಳೆ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕಳೆದ ನಾಲ್ಕು ದಿನಗಳಿಂದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಜಿಟಿಜಿಟಿ ಮಳೆ ಬೀಳುತ್ತಿದ್ದು, ಮೋಡ ಮುಸುಕಿದ ವಾತಾವರಣ ಕಂಡುಬಂದಿದೆ.
ಅಸಾನಿ ಚಂಡಮಾರುತವು ಕ್ಷೀಣವಾಗಿದ್ದು, ನಿರೀಕ್ಷೆಯಂತೆ ಅದರ ಪ್ರಭಾವ ಕಡಿಮೆಯಾಗತೊಡಗಿದೆ. ನಾಳೆಯಿಂದ ಮೋಡದ ಪ್ರಮಾಣ ಕಡಿಮೆಯಾಗಲಿದ್ದು, ಬಿಸಿಲಿನ ವಾತಾವರಣ ಕಂಡುಬರಲಿದೆ. ಆದರೂ ಆಗಾಗ್ಗೆ ಕೆಲವೆಡೆ ಹಗುರ ಇಲ್ಲವೆ ಸಾಧಾರಣ ಮಳೆ ಮುಂದುವರಿಯಲಿದೆ. ಅಸಾನಿ ಚಂಡಮಾರುತದಿಂದಾಗಿ ನೈಋತ್ಯ ಮುಂಗಾರು ಅವಧಿಗಿಂತ ಮುಂಚೆಯೇ ಆಗಮಿಸುವ ಸೂಚನೆಗಳು ಕಂಡುಬರುತ್ತವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.