ಅಯೋಧ್ಯೆ: ದೇಶದೆಲ್ಲೆಡೆ ಸಂಭ್ರಮ, ಇಡೀ ವಿಶ್ವವೇ ಕಾಯುತ್ತಿದ್ದ ಆಯೋಧ್ಯೆ ಭವ್ಯ ರಾಮ ಮಂದಿರದ ಪ್ರಾಣಪ್ರತಿಷ್ಠೆ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿ ಭವ್ಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಿಸಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ ಪ್ರಧಾನಿ ಮೋದಿ, ಬೆಳ್ಳಿ ಛಾತ್ರ ಹಾಗೂ ವಸ್ತ್ರವನ್ನು ರಾಮಲಲ್ಲಾಗೆ ಅರ್ಪಿಸಿ ಪೂಜಾ ವಿಧಿವಿಧಾನದಲ್ಲಿ ಪಾಲ್ಗೊಂಡರು. ಆಯೋಧ್ಯೆ ಪ್ರಧಾನ ಅರ್ಚಕರ ಮಾರ್ಗದರ್ಶನದಂತೆ ಪ್ರಧಾನಿ ಮೋದಿ ತಮ್ಮ ಅಮೃತ ಹಸ್ತದಿಂದ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಿಸಿದ್ದಾರೆ.
ಗರ್ಭಗುಡಿ ಪ್ರವೇಶಕ್ಕೂ ಮೊದಲು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ಬಳಿಕ ಗರ್ಭಗುಡಿ ಪ್ರವೇಶಿಸಿ, ಪ್ರಾಣಪ್ರತಿಷ್ಠೆ ಪೂಜಾವಿಧಿಗಳನ್ನು ನೇರವೇರಿಸಿದ್ದಾರೆ.ಗರ್ಭಗುಡಿಯಲ್ಲಿ ಪ್ರಾಣಪ್ರತಿಷ್ಠೆಯ ಮುಖ್ಯ ಯಜಮಾನನಾಗಿ ವಿಧಿವಿಧಾನಗಳನ್ನು ನೇರವೇರಿಸಿದ್ದರೆ. ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಮಾರ್ಗದರ್ಶನದೊಂದಿಗೆ ಪ್ರಾಣಪ್ರತಿಷ್ಠೆ ನೆರವೇರಿದೆ. ಈ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ , ರಾಜ್ಯಾಪಾಲೆ ಆನಂದಿ ಬೆನ್ ಪಟೇಲ್, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಟ್ರಸ್ಟ್ನ ಪ್ರಧಾನ ಸದಸ್ಯರು ಗರ್ಭಗುಡಿಯಲ್ಲಿ ಉಪತಸ್ಥಿತರಿದ್ದರು.
ಪ್ರಾಣಪ್ರತಿಷ್ಠೆ ಹಾಗೂ ಪೂಜಾ ವಿಧಿವಿಧಾನಗಳ ವೇಳೆ ಪ್ರಧಾನಿ ಮೋದಿ ಕೂಡ ಮಂತ್ರ ಪಠಿಸಿ ರಾಮನಾಮ ಜಪ ಮಾಡಿದ್ದಾರೆ. 12.30ರ ವೇಳೆ ಪ್ರಾಣಪ್ರತಿಷ್ಠೆ ನೆರವೇರಿದೆ. ಕಲಮ ಹೂವುಗಳನ್ನು ಅರ್ಪಿಸಿದ ಮೋದಿ, ಪ್ರಾರ್ಥನೆ ಮಾಡಿದರು. ಪ್ರಾಣಪ್ರತಿಷ್ಠೆ ನೆರವೇರಿಸಿರುವ ಪ್ರಧಾನಿ ಮೋದಿ, ಆಯೋಧ್ಯೆಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ದೇಶದ ಜನತೆಯನ್ನುದ್ದೇಶಿ ಭಾಷಣ ಮಾಡಲಿದ್ದಾರೆ.