ಮುಸಲ್ಮಾನರ ಉಪವಾಸ ತಿಂಗಳು ಆಗಿರುವ ರಂಜಾನ್ನಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ರಾಜ್ಯ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೆ ತೆಲಂಗಾಣದಲ್ಲಿರುವ ಕಾಂಗ್ರೆಸ್ ಸರ್ಕಾರ ಮತ್ತು ಆಂಧ್ರಪ್ರದೇಶದಲ್ಲಿರುವ ತೆಲುಗು ದೇಶಂ ನೇತೃತ್ವದ ಸರ್ಕಾರ ವಿಶೇಷ ವಿನಾಯಿತಿಯನ್ನು ಘೋಷಿಸಿದೆ.
ಮಾರ್ಚ್ 2ರಿಂದ ಮಾರ್ಚ್ 31ರವರೆಗೆ ಅಂದರೆ ರಂಜಾನ್ ತಿಂಗಳ ಅವಧಿಯಲ್ಲಿ ಮುಸಲ್ಮಾನರು ಸಂಜೆ ತಮ್ಮ ಕೆಲಸ ಅವಧಿಗೂ ಒಂದು ಗಂಟೆ ಮೊದಲು ಕಚೇರಿಯಿಂದ ಹೊರಡಲು ಅನುಮತಿ ನೀಡಿದೆ.
ಈ ಸಂಬಂಧ ಸೋಮವಾರದಂದು ತೆಲಂಗಾಣದ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಇತ್ತ ಆಂಧ್ರದಲ್ಲಿರುವ ತೆಲುಗುದೇಶಂ-ಜನಸೇನಾ ಮತ್ತು ಭಾರತೀಯ ಜನತಾ ಪಕ್ಷ ನೇತೃತ್ವದ ಸಮ್ಮಿಶ್ರ ಸರ್ಕಾರ ಆದೇಶ ಹೊರಡಿಸಿದೆ.
ಫೆಬ್ರವರಿ 28ರ ಶುಕ್ರವಾರ ಅಥವಾ ಮಾರ್ಚ್ 1ರ ಶನಿವಾರದಿಂದ ರಂಜಾನ್ ತಿಂಗಳು ಆರಂಭವಾಗಲಿದೆ. ಮಾರ್ಚ್ 31ರಂದು ಉಪವಾಸದ ತಿಂಗಳು ಮುಕ್ತಾಯವಾಗಲಿದೆ.
ರಂಜಾನ್ ತಿಂಗಳಲ್ಲಿ ಸಂಜೆ ದಿನದ ಸೂರ್ಯಸ್ತಮಾನದ ಬಳಿಕ ಉಪವಾಸವನ್ನು ಕೊನೆಗೊಳಿಸಿ ಮುಸಲ್ಮಾನರು ಆಹಾರ ಸೇವನೆ ಮಾಡುತ್ತಾರೆ. ದಿನದ ಉಪವಾಸ ಅಂತ್ಯಗೊಳಿಸುವುದಕ್ಕೂ ಮೊದಲು ಇಸ್ಲಾಂ ಸಂಪ್ರದಾಯದಂತೆ ಪಾಲಿಸಬೇಕಿರುವ ವಿಧಿ ವಿಧಾನಗಳ ಪಾಲನೆಗೆ ಸಂಜೆ ಸಮಯ ಬೇಕಾಗುತ್ತದೆ.
ಇದಕ್ಕಾಗಿಯೇ ರಾಜ್ಯ ಸರ್ಕಾರಿ ನೌಕರರು ಆಗಿರುವ ಶಿಕ್ಷಕರು ಒಳಗೊಂಡಂತೆ ಇಸ್ಲಾಂ ಧರ್ಮಕ್ಕೆ ಸೇರಿದ ಎಲ್ಲಾ ನೌಕರರು/ಗುತ್ತಿಗೆ ನೌಕರರಿಗೆ ಸಂಜೆ ಅವಧಿಗೂ ಮೊದಲೇ ಕಚೇರಿಯಿಂದ ಹೊರಡುವ ವಿನಾಯಿತಿಯನ್ನು ನೀಡಲಾಗಿದೆ.
ADVERTISEMENT
ADVERTISEMENT