ವರಮಹಾಲಕ್ಷ್ಮೀ ಹಬ್ಬದಂದೇ ದೇಶದ ಜನಸಾಮಾನ್ಯರಿಗೆ ಆಘಾತ. ಭಾರತೀಯ ರಿಸರ್ವ್ ಬ್ಯಾಂಕ್ ಆರ್ಬಿಐ ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಿದೆ.
ರೆಪೋ ದರವನ್ನು ಆರ್ಬಿಐ ಶೇಕಡಾ 0.50ಯಷ್ಟು ಹೆಚ್ಚಳ ಮಾಡಿದೆ. ರೆಪೋ ದರ ಎಂದರೆ ಬ್ಯಾಂಕುಗಳಿಗೆ ಆರ್ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರ. ರೆಪೋ ದರ ಹೆಚ್ಚಳದಿಂದ ಆಗುವ ಹೊರೆಯನ್ನು ಬ್ಯಾಂಕುಗಳ ಸಹಜವಾಗಿ ಗ್ರಾಹಕರಿಗೆ ವರ್ಗಾಯಿಸುತ್ತವೆ.
ಇದರೊಂದಿಗೆ ವೈಯಕ್ತಿಕ ಸಾಲ, ಮನೆ ಸಾಲ, ವಾಹನ ಸಾಲ, ಕ್ರೆಡಿಟ್ ಕಾರ್ಡ್ ಸಾಲ ಸೇರಿದಂತೆ ಎಲ್ಲ ರೀತಿಯ ಸಾಲಗಳು ದುಬಾರಿ ಆಗಲಿವೆ. ಈಗ ತೆಗೆದುಕೊಂಡಿರುವ ಸಾಲ ಮತ್ತು ಮುಂದೆ ಮಾಡಲಾಗುವ ಸಾಲಗಳ ಮೇಲೆ ಬಡ್ಡಿ ಹೆಚ್ಚಳ ಆಗಲಿದೆ.
ರೆಪೋ ದರ ಈ ಮೂಲಕ ಶೇಕಡಾ 5.54ಕ್ಕೆ ಹೆಚ್ಚಳ ಆಗಿದೆ. ಇದರೊಂದಿಗೆ ಕೋವಿಡ್ ಅಲೆ ಅಪ್ಪಳಿಸುವುದಕ್ಕೂ ಮೊದಲು ಇದ್ದ ರೆಪೋ ದರ ಈ ಗೆರೆ ದಾಟಿದೆ. ಕೊರೋನಾ ಕಾಲಕ್ಕೂ ಮೊದಲು ರೆಪೋ ದರ ಶೇಕಡಾ 5.15ರಷ್ಟಿತ್ತು.
ಏಪ್ರಿಲ್ 1ರಿಂದ ಶುರುವಾಗುವ ಆರ್ಥಿಕ ವರ್ಷದಲ್ಲಿ ಒಟ್ಟು ಮೂರು ಬಾರಿ ರೆಪೋ ದರ ಹೆಚ್ಚಳ ಆಗಲಿದೆ. ಮೇನಲ್ಲಿ ಶೇಕಡಾ 0.40ಯಷ್ಟು ಮತ್ತು ಜೂನ್ನಲ್ಲಿ ಶೇಕಡಾ 0.50ಯಷ್ಟು ರೆಪೋ ದರವನ್ನು ಹೆಚ್ಚಳ ಮಾಡಿತ್ತು. ಈ ಮೂಲಕ ಕಳೆದ ಮೂರು ತಿಂಗಳ ಅವಧಿಯಲ್ಲಿ ರೆಪೋ ದರ ಶೇಕಡಾ 1.40ರಷ್ಟು ಹೆಚ್ಚಳ ಆಗಿದೆ.