ಮುಸ್ಲಿಂ ವರ್ತಕರಿಗೆ ನಿರ್ಬಂಧ ವಿಧಿಸಿರುವುದು ಅಸ್ಪೃಶ್ಯತೆ ಆಚರಣೆಯಲ್ಲದೇ ಮತ್ತೇನೂ ಅಲ್ಲ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಅವರು ಹೇಳಿದ್ದಾರೆ.
ಭಾನುವಾರ ಗೋಕಾಕದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮಾತನಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನದ ಆವರಣದಲ್ಲಿ ಮುಸ್ಲಿಮರು ವ್ಯಾಪಾರ ವಹಿವಾಟು ನಡೆಸುವುದನ್ನು ನಿಷೇಧಿಸಿರುವುದು ತರ್ಕಬದ್ಧವಲ್ಲ. ಸರಕಾರ ಮೌನ ಮುರಿದು ದೇವಸ್ಥಾನದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಜನರೇ ಕ್ರಮಕೈಗೊಳ್ಳುತ್ತಾರೆಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ‘ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್’ ಎಂಬ ಸಂದೇಶ ನೀಡಿದ್ದಾರೆ. ಆದರೆ, ನಮ್ಮ ರಾಜ್ಯ ತಪ್ಪು ಹಾದಿಯಲ್ಲಿ ಸಾಗುತ್ತಿದೆ. ದೇವಸ್ಥಾನಗಳ ಬಳಿ ಹೂವು, ಹಣ್ಣು, ಪೂಜೆ ಸಾಮಾಗ್ರಿ ಮಾರಾಟವನ್ನೇ ನಂಬಿಕೊಂಡು ಬದುಕುತ್ತಿರುವ ಮುಸಲ್ಮಾನರು ತಮ್ಮ ಜೀವನೋಪಾಯಕ್ಕೆ ಏನು ಮಾಡಬೇಕು. ಇದು ಅಸ್ಪೃಶ್ಯತೆಗೆ ಸಮಾನವಾಗಿದೆ. ಪಕ್ಷ, ಜಾತಿ, ಧರ್ಮ ಮೀರಿ ಸರ್ಕಾರ ಚಿಂತನೆ ನಡೆಸಬೇಕು ಎಂದು ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನಿರಾಕರಿಸಿದ ಕುರಿತು ಮಾತನಾಡಿ, “ಕೆಲವು ಅಪರಿಚಿತ ಕೈಗಳು ತೆರೆಮರೆಯಲ್ಲಿ ಕೆಲಸ ಮಾಡುತ್ತಿವೆ, ನನ್ನನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿವೆ. ಈಗಿನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾವೇ ಕಾರಣ. ಪಕ್ಷವು ನಮ್ಮನ್ನು ಹತ್ತಿಕ್ಕಲು ಯತ್ನಿಸಿದರೆ ನಾವು ಸಹಿಸುವುದಿಲ್ಲ. ಸಿದ್ದರಾಮಯ್ಯ, ಜಾರಕಿಹೊಳಿ ಹಾಗೂ ನನ್ನನ್ನೂ ಒಳಗೊಂಡಂತೆ ಹಿಂದುಳಿದ ನಾಯಕರ ವಿರುದ್ಧದ ವಾತಾವರಣ ಇದೀಗ ರಾಜ್ಯದಲ್ಲಿ ನಿರ್ಮಾಣವಾಗುತ್ತಿದೆ ಎಂದಿದ್ದಾರೆ.