ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಇಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದೆ ಇಂಧನ ಬೆಲೆ ಏರಿಕೆ ವಿರೋಧಿಸಿ ಮಾರ್ಚ್ 31 ರಂದು ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಪಕ್ಷ ಘೋಷಿಸಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಅವರು, “ಮಾರ್ಚ್ 31 ರಂದು ಬೆಳಿಗ್ಗೆ 11 ಗಂಟೆಗೆ ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆ ವಿರುದ್ಧ ‘ಕಿವುಡ’ ಬಿಜೆಪಿ ಸರ್ಕಾರದ ಗಮನ ಸೆಳೆಯಲು ಜನರು ತಮ್ಮ ಮನೆ ಮತ್ತು ಸಾರ್ವಜನಿಕ ಸ್ಥಳಗಳ ಹೊರಗೆ ಗ್ಯಾಸ್ ಸಿಲಿಂಡರ್ ಮತ್ತು ಡ್ರಮ್,ಗಂಟೆ ಇತರ ವಾದ್ಯಗಳೊಂದಿಗೆ ಪ್ರತಿಭಟನೆ ನಡೆಸಲಿದ್ದಾರೆ ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಶನಿವಾರ ಲೀಟರ್ಗೆ ತಲಾ 80 ಪೈಸೆ ಹೆಚ್ಚಿಸಲಾಗಿದೆ, ತೈಲ ಸಂಸ್ಥೆಗಳು ಕಚ್ಚಾ ವಸ್ತುಗಳ ಬೆಲೆಯಲ್ಲಿ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸಿದ್ದರಿಂದ ಐದು ದಿನಗಳಲ್ಲಿ ಇದು ನಾಲ್ಕನೇ ಹೆಚ್ಚಳವಾಗಿದೆ.
ಕೊರೋನಾ ಸಮಯದಲ್ಲಿ ಬಿಜೆಪಿ ಬಳಸಿದ್ದ ಅಭಿಯಾನವನ್ನೇ ಕಾಂಗ್ರೆಸ್ ಪಕ್ಷ ಇದೀಗ ಬಿಜೆಪಿ ವಿರುದ್ಧ ಬಳಸಲು ಸಿದ್ಧತೆ ನಡೆಸಿದೆ. ಕೊರೋನಾ ಲಾಕ್ಡೌನ್ ಸಮಯದಲ್ಲಿ ನರೇಂದ್ರ ಮೋದಿಯವರು ಆರೋಗ್ಯ ಕಾರ್ಯಕರ್ತರಿಗೆ ಧೈರ್ಯ ತುಂಬಲು ದೇಶವಾಸಿಗಳು ತಮ್ಮ ಮನೆಯ ಹೊರಗೆ ಬಂದು ಗಂಟೆ, ಜಾಗಟೆ ಅಥವಾ ತಟ್ಟೆಯನ್ನು ಬಾರಿಸಬೇಕೆಂದು ಕರೆ ಕೊಟ್ಟಿದ್ದರು.
ಇದೀಗ ಕಾಂಗ್ರೆಸ್ ಇದೇ ಉಪಾಯವನ್ನು ಬಳಸಿಕೊಂಡಿದ್ದು, ಬೆಲೆ ಏರಿಕೆಯಾಯ ವಿರುದ್ಧ ಗ್ಯಾಸ್, ಸಿಲಿಂಡರ್, ಡ್ರಮ್ಸ್, ಬೆಲ್ಸ್ ಮುಂತಾದ ವಾದ್ಯಗಳ ಮೂಲಕ ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿದೆ.
ಕಾಂಗ್ರೆಸ್ ಪಕ್ಷವು 3 ಹಂತಗಳಲ್ಲಿ “ಬೆಲೆ ಏರಿಕೆ ಮುಕ್ತ ಭಾರತ್ ಅಭಿಯಾನ” ಘೋಷಿಸಿದೆ. ಮಾರ್ಚ್ 21 ರಿಂದ ಸ್ಥಳಿಯ ಮಟ್ಟದಿಂದ ಆರಂಭವಾಗುವ ಈ ಹೋರಾಟ ಏಪ್ರೀಲ್ 7 ಕ್ಕೆ ಕೇಂದ್ರ ವರೆಗೆ ನಡೆಯಲಿದೆ ಎಂದು ಹೇಳಿದೆ.
ಈ ಹಿಂದೆ ಬೆಲೆ ಏರಿಕೆಯ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿಯವರು, “ರಾಜ ಅರಮನೆಗಾಗಿ ತಯಾರಿ ನಡೆಸುತ್ತಾನೆ, ಆದರೆ ಪ್ರಜೆಗಳು ಹಣದುಬ್ಬರದಿಂದ ತತ್ತರಿಸುತ್ತಿದ್ದಾರೆ” ಎಂದು ಹೇಳಿದ್ದರು.
https://youtu.be/ihOEoNnfIT8