ಚುನಾವಣಾ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕೀಯದ ಕಾರ್ಯಚಟುವಟಿಕೆಗಳು ಗರಿಗೆದರುತ್ತಿವೆ. ಈ ಬೆನ್ನಲ್ಲೇ, ರಾಜ್ಯದಲ್ಲಿ ಮತ್ತೊಂದು ನೂತನ ಪಕ್ಷ ಆರಂಭವಾಗುತ್ತಿದೆ.
ಅಗಸ್ಟ್ 7 ಭಾನುವಾರದಂದು ಬೆಂಗಳೂರಿನಲ್ಲಿ ನೂತನ ಪಕ್ಷವಾದ ‘ಹಿಂದೂಸ್ಥಾನ ಜನತಾ ಪಾರ್ಟಿ’ ಅಸ್ತಿತ್ವಕ್ಕೆ ಬರಲಿದೆ.
ವಿನಾಯಕ್ ಮಾಳದಕರ ಈ ನೂತನ ಪಕ್ಷದ ಅಧ್ಯಕ್ಷರಾಗಿದ್ದಾರೆ. ನಾಳೆ ನಡೆಯುವ ಪಕ್ಷದ ಉದ್ಘಾಟನಾ ಸಮಾರಂಭದಲ್ಲಿಯೇ ಪಕ್ಷದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನೂ ಆಯೋಜಿಸಲಾಗಿದೆ.
ಬೆಂಗಳೂರಿನ ರಾಜಾಜಿನಗರದ ಶರಣ ಸೇವಾ ಸಮಾಜದಲ್ಲಿ ನಾಳೆ ಮಹತ್ವದ ಸಭೆ ನಡೆಯಲಿದೆ. ನಂತರ ಮಠಾಧೀಶರಿಂದ ನೂತನ ಪಕ್ಷಕ್ಕೆ ಚಾಲನೆ ದೊರೆಯಲಿದೆ.
ಬಿಬಿಎಂಪಿ ಹಾಗೂ ರಾಜ್ಯ ವಿಧಾನಸಭೆಯ ಚುನಾವಣೆ ಶೀಘ್ರವೇ ಬರುತ್ತಿರುವ ಹಿನ್ನೆಲೆಯಲ್ಲಿ ನೂತನ ಪಕ್ಷದ ಮಹತ್ವ ಮತ್ತಷ್ಟು ಹೆಚ್ಚಿದೆ.
ಹಿಂದುತ್ವದ ಆಧಾರದ ಮೇಲೆ ನೂತ ಪಕ್ಷ ಅಸ್ತಿತ್ವಕ್ಕೆ ಬಂದಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ನೂತನ ಪಕ್ಷದಿಂದ ಹಿಂದುತ್ವದ ಆಧಾರದ ಮೇಲೆ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷಕ್ಕೆ ಹೊಡೆತ ಬೀಳುವುದೇ ಎನ್ನುವುದನ್ನು ಕಾಯ್ದು ನೋಡಬೇಕಿದೆ.
ನಾಳೆ ನಡೆಯುವ ಪಕ್ಷದ ಸಮಾರಂಭದಲ್ಲಿ ಪಕ್ಷದ ಧ್ಯೇಯೋದ್ದೇಶ, ಪಕ್ಷದ ಗುರಿಗಳು ಮುಂತಾದವುಗಳ ಬಗ್ಗೆ ಸ್ಪಷ್ಟನೆ ದೊರಕಲಿದೆ.