ರಾಜಮೌಳಿಯ ಮ್ಯಾಜಿಕ್ ಕ್ಯಾನ್ವಾಸ್ ನಲ್ಲಿ ಮೂಡಿಬಂದ RRR ಚಿತ್ರ ಎಲ್ಲರನ್ನು ಮಂತ್ರಮುಗ್ದಗೊಳಿಸುತ್ತಿದೆ.
ಅದರಲ್ಲೂ ಮಲ್ಲಿ ಪಾತ್ರಧಾರಿ ಹಾಡುವ ಕೊಮ್ಮ ಉಯ್ಯಾಲ.. ಕೋನ ಜಂಪಾಲ.. ಅಮ್ಮ ವೊಡಿಲೋ ರೋಜೂ ಊಗಾಲ.. ಹಾಡು ಎಲ್ಲರೂ ಗುನುಗುವಂತಿದೆ.
ಇದನ್ನು ಹಾಡನ್ನು ಹಾಡಿದ್ದು ಯಾರು ಎಂಬ ಕುತೂಹಲ ಎಲ್ಲರಲ್ಲಿ ಇತ್ತು. ಕೆಲವರು ಚಿತ್ರತಂಡಕ್ಕೆ ಸಂದೇಶ ಕೂಡಾ ಕಳಿಸಿದ್ದರು. ಇದೀಗ RRR ಚಿತ್ರತಂಡ ಬಾಲ ಗಾಯಕಿಯ ಪರಿಚಯ ಮಾಡಿಕೊಟ್ಟಿದೆ.
ಕೊಮ್ಮ ಉಯ್ಯಾಲ.. ಕೋನ ಜಂಪಾಲ.. ಅಮ್ಮ ವೊಡಿಲೋ ರೋಜೂ ಊಗಾಲ.. ಹಾಡನ್ನು ಹಾಡಿದ್ದು ನಮ್ಮ ಕನ್ನಡತಿ. 12ವರ್ಷದ ಬಾಲೆ ಬಳ್ಳಾರಿಯ ಪ್ರಕೃತಿ ರೆಡ್ಡಿ.
2010ರ ಜುಲೈ 21ರಂದು ಬಳ್ಳಾರಿಯಲ್ಲಿ ಜನಿಸಿದ ಪ್ರಕೃತಿ ರೆಡ್ಡಿಗೆ ಚಿಕ್ಕಂದಿನಿಂದಲೇ ಸಂಗೀತ ಅಂದರೆ ಪ್ರಾಣ. ಇದನ್ನು ಗಮನಿಸಿದ ಪೋಷಕರು, ಮಗಳಿಗೆ ಶಾಸ್ತ್ರಿಯ ಸಂಗೀತಕ್ಕೆ ಸೇರಿಸಿದರು.
ಶಿಕ್ಷಣದ ಜೊತೆಗೆ ಸಂಗೀತವನ್ನು ಕಲಿತ ಪ್ರಕೃತಿ ರೆಡ್ಡಿ, ಹಲವು ರಿಯಾಲಿಟಿ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಎಲ್ಲರನ್ನು ಮೆಚ್ಚಿಸಿದರು. ತೆಲುಗು, ಕನ್ನಡ, ಹಿಂದಿ ಸಿನಿಮಾಗಳಲ್ಲಿ ಹಾಡುವ ಚಾನ್ಸ್ ಕೂಡಾ ಗಿಟ್ಟಿಸಿದರು.
SP ಬಾಲಸುಬ್ರಹ್ಮಣ್ಯಮ್, ವಾಣಿ ಜಯರಾಮ್, ಕೋಟಿ, ಸುನೀತಾ, ಚಂದ್ರಬೋಸ್ ಮುಂತಾದ ಗಾಯಕರ ಮೆಚ್ಚುಗೆ ಗಳಿಸಿದ್ದಾರೆ.