ADVERTISEMENT
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ನೀಡಿದ್ದ ಅವಹೇಳನಕಾರಿ ಹೇಳಿಕೆ ಸಂಬಂಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಪ್ರಕರಣವನ್ನು ರದ್ದುಗೊಳಿಸುವಂತೆ ವಿಜಯಪುರ ಶಾಸಕ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ಮಾನ್ಯ ಮಾಡಿದೆ.
ರಾಹುಲ್ ಗಾಂಧಿಯವರು ವಿದೇಶದಲ್ಲಿ ಕೊಟ್ಟ ಕೆಲವು ಹೇಳಿಕೆಗಳ ಸಂಬಂಧ ನಾನು ಪ್ರತಿಕ್ರಿಯೆ ಕೊಟ್ಟಿದ್ದಾನೆ. ಒಂದು ವೇಳೆ ಕಾಂಗ್ರೆಸ್ ನಾಯಕನಿಗೆ ತಮ್ಮ ಹೇಳಿಕೆಯಿಂದ ಘಾಸಿಯಾಗಿದ್ದರೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಹೈಕೋರ್ಟ್ನಲ್ಲಿ ಯತ್ನಾಳ್ ಪರ ವಕೀಲ ವೆಂಕಟೇಶ್ ದಳವಾಯಿ ವಾದಿಸಿದ್ದರು. ನಾನು ರಾಹುಲ್ ಗಾಂಧಿಯವರ ಭಾಷಣವನ್ನು ಪ್ರಶ್ನಿಸಿದ್ದೇನೆ. ಆದರೆ ನನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ನನ್ನ ಕೃತ್ಯದ ಬಗ್ಗೆ ಹೇಳಲಾಗಿಲ್ಲ ಎಂದೂ ಯತ್ನಾಳ್ ಪರ ವಕೀಲರು ವಾದಿಸಿದ್ದರು.
ಯತ್ನಾಳ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 192 (ದಂಗೆಗೆ ಪ್ರಚೋದನೆ), 196 (ಕೋಮುಗಳ ನಡುವೆ ದ್ವೇಷ ಭಾವನೆ ಮೂಡಿಸುವುದು), 353(2) (ಸಾರ್ವಜನಿಕವಾಗಿ ಅನುಚಿತ ವರ್ತನೆ) ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ʻರಾಹುಲ್ ಗಾಂಧಿ ವಿದೇಶದಲ್ಲಿ ಹೋಗಿ ಹೇಳಿಕೆಗಳನ್ನು ಕೊಡ್ತಾರೆ, ಅದರಿಂದ ವಿದೇಶದಲ್ಲಿ ಅಶಾಂತಿ ಸೃಷ್ಟಿಯಾಗುತ್ತೆ. ಅವರ ತಾಯಿ ಇಟಲಿ ಪ್ರಜೆ ಎನ್ನುವುದನ್ನು ರಾಹುಲ್ ಗಾಂಧಿ ವಿರೋಧಿಸ್ತಾರೆಯೇ..? ನಾನು ಆಕೆಯ ನಡತೆ ಬಗ್ಗೆ ಹೇಳಿಲ್ಲ, ಹೀಗಿರುವಾಗ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಪ್ರಶ್ನೆ ಎಲ್ಲಿ..? ರಾಜಕಾರಣಿಯಾಗಿರುವ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಭಾರತದ ವಿರುದ್ಧವೇ ತಲೆಹರಟೆ ಹೇಳಿಕೆಗಳನ್ನು ಕೊಡ್ತಾರೆ, ಅದಕ್ಕೆ ನಾನು ಯಾಕೆ ಪ್ರತಿಕ್ರಿಯಿಸಬಾರದು..? ನನ್ನ ಹೇಳಿಕೆಗಳಿಂದ ಅವರಿಗೆ ಘಾಸಿಯಾಗಿದ್ದರೆ ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ, ನಾನು ಕಾನೂನು ಹೋರಾಟ ಮಾಡ್ತೇನೆʼ ಎಂದು ಯತ್ನಾಳ್ ಅವರ ಪರ ವಕೀಲರು ವಾದಿಸಿದರು.
ಕಾಂಗ್ರೆಸ್ ಮುಖಂಡ ಎಸ್ ಮನೋಹರ್ ಕೊಟ್ಟ ದೂರಿನ ಮೇರೆಗೆ ಯತ್ನಾಳ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ADVERTISEMENT