ಈ ವರ್ಷದ ಅಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಕಾಂಗ್ರೆಸ್ಗೆ ದೊಡ್ಡ ಆಘಾತ ಎದುರಾಗಿದೆ. ಕಾಂಗ್ರೆಸ್ ಯುವ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ, ರಾಜಸ್ಥಾನ ಕಾಂಗ್ರೆಸ್ನ ಮಾಜಿ ಅಧ್ಯಕ್ಷರೂ ಆಗಿರುವ ಸಚಿನ್ ಪೈಲಟ್ ಅವರು ಕಾಂಗ್ರೆಸ್ ಬಿಡಲಿದ್ದಾರೆ.
ಜೂನ್ 11ರಂದು ಹೊಸ ಪಕ್ಷ ಘೋಷಣೆ:
ಜೂನ್ 11ರಂದು ಸಚಿನ್ ಪೈಲಟ್ ಅವರು ತಮ್ಮ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಹೊಸ ಪಕ್ಷಕ್ಕೆ ಪ್ರಗತಿಶೀಲ ಕಾಂಗ್ರೆಸ್ ಎಂದು ನಾಮಕರಣ ಮಾಡಲಿದ್ದಾರೆ.
ಜೂನ್ 11 ಸಚಿನ್ ಪೈಲಟ್ ಅವರ ತಂದೆ ರಾಜೇಶ್ ಪೈಲಟ್ ಅವರ ಪುಣ್ಯತಿಥಿ.
ಪ್ರಶಾಂತ್ ಕಿಶೋರ್ ಸಲಹೆ:
ಅಂದಹಾಗೆ ಕಾಂಗ್ರೆಸ್ನಿಂದ ಹೊರಬಂದು ಹೊಸ ಪಕ್ಷ ರಚಿಸುವಂತೆ ಸಚಿನ್ ಪೈಲಟ್ಗೆ ಸಲಹೆ ಕೊಟ್ಟಿರುವುದು ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್.
ಅವರ ಮಾರ್ಗದರ್ಶನದಲ್ಲೇ ಪೈಲಟ್ ಪಕ್ಷ ಸಂಘಟನೆಗೆ ಬೇಕಾಗಿರುವ ರಣತಂತ್ರಗಳನ್ನು ಮಾಡುತ್ತಿದ್ದಾರೆ.
ಎರಡು ಪಕ್ಷಗಳ ಜೊತೆಗೆ ಮೈತ್ರಿ:
ಹೊಸ ಪಕ್ಷ ಘೋಷಿಸಿದ ಬಳಿಕ ಪೈಲಟ್ ಅವರು ಎರಡು ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆ ಇದೆ. ಹನುಮಾನ್ ಬೆನಿವಾಲ್ ಅವರ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ ಮತ್ತು ಆಮ್ ಆದ್ಮಿ ಪಕ್ಷದ ಜೊತೆಗೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಮೂಲಕ ರಾಜಸ್ಥಾನದಲ್ಲೇ ತೃತೀಯ ರಂಗ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ.
ಈಡೇರದ ಮೂರು ಬೇಡಿಕೆ:
ತಮ್ಮದೇ ಸರ್ಕಾರದ ವಿರುದ್ಧ ಸಿಡಿದೆದಿದ್ದ ಪೈಲಟ್ ಅವರು ಸಿಎಂ ಅಶೋಕ್ ಗೆಹ್ಲೋಟ್ ಅವರ ಮುಂದೆ ಮೂರು ಬೇಡಿಕೆಗಳನ್ನಿಟ್ಟಿದ್ದರು. 1) ವಸುಂಧರಾ ರಾಜೆ ಸಿಎಂ ಆಗಿದ್ದ ಅವಧಿಯಲ್ಲಿ ನಡೆದಿದ್ದ ಭ್ರಷ್ಟಾಚಾರದ ಬಗ್ಗೆ ತನಿಖೆ ಆಗ್ಬೇಕು. 2) ರಾಜಸ್ಥಾನ ಲೋಕಸೇವಾ ಆಯೋಗವನ್ನು ಪುನರ್ರಚನೆ ಮಾಡ್ಬೇಕು 3) ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ತೊಂದರೆ ಅನುಭವಿಸಿರುವ ಅಭ್ಯರ್ಥಿಗಳಿಗೆ ಪರಿಹಾರ ನೀಡ್ಬೇಕು.
ಈ ಬೇಡಿಕೆಗಳ ಜಾರಿಗೆ ಮೇ 31ರವರೆಗೆ ಗಡುವು ನೀಡಿದ್ದರು. ಆದರೆ ಆ ಬೇಡಿಕೆ ಈಡೇರಲಿಲ್ಲ.
ಸರ್ಕಾರದ ವಿರುದ್ಧವೇ ಹೋರಾಟ:
ತಮ್ಮದೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಚಿನ್ ಪೈಲಟ್ ಅವರು ಏಪ್ರಿಲ್ 11ರಂದು ಒಂದು ದಿನ ಉಪವಾಸ ಸತ್ಯಾಗ್ರಹ ಮತ್ತು ಮೇ 11ರಿಂದ ಐದು ದಿನ ಪಾದಯಾತ್ರೆ ಕೈಗೊಂಡಿದ್ದರು.
ರಾಹುಲ್ ಸಂಧಾನ ವಿಫಲ:
ಮೇ 29ರಂದು ನವದೆಹಲಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರಿಬ್ಬರನ್ನು ಕೂರಿಸಿ ಮುಖಾಮುಖಿ ಮಾತುಕತೆ ನಡೆಸಲಾಗಿತ್ತು.
ಈ ಸಭೆಯಲ್ಲೇ ರಾಹುಲ್ ಗಾಂಧಿ ಅವರು ಪೈಲಟ್ ಅವರಿಗೆ ನಿಮ್ಮ ಜೊತೆಗೆ ನಾನಿದ್ದೇನೆ, ಆದ್ರೆ ಈಗ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡಿ ಎಂದು ಸೂಚಿಸಿದ್ದರು. ಆದರೆ ಆ ಸಂಧಾನ ಫಲಕೊಟ್ಟಿಲ್ಲ.