ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಾ ಚೌಧರಿ ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಕನ್ನಡದ ನೂರಾರು ಸಿನಿಮಾಗಳಲ್ಲಿ ನಟಿಸಿರುವ ನಟಿ ಹೇಮಾ ಚೌಧರಿ ಅವರಿಗೆ ಬ್ರೇನ್ ಹ್ಯಾಮರೇಜ್ ಆಗಿದೆ ಎಂದು ತಿಳಿದು ಬಂದಿದೆ.
ತೀವ್ರ ನಿಗಾ ಘಟಕದಲ್ಲಿ ನಟಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲವೆಂದು ತಿಳಿದು ಬಂದಿದೆ.
ಸದ್ಯ ಹೇಮ ಚೌಧರಿ ಪುತ್ರ ಐರ್ಲೆಂಡ್ನಲ್ಲಿ ಇದ್ದು, ಅವರ ಆಗಮನಕ್ಕಾಗಿ ನಟಿ ಕಾಯುತ್ತಿದ್ದಾರೆ. ಹಿರಿಯ ನಟಿ ಬೇಗ ಗುಣಮುಖರಾಗಲಿ ಅಂತಾ ಕನ್ನಡ ಚಿತ್ರರಂಗದ ನಿರ್ದೇಶಕರು-ನಿರ್ಮಾಪಕರು ಮತ್ತು ನಟ-ನಟಿಯರು ಸೇರಿದತೆ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಹಿರಿಯ ನಟಿ ಲೀಲಾವತಿ ಅವರು ನಿಧನ ಹೊಂದಿದರು. ಲೀಲಾವತಿಯವರ 11ನೇ ದಿನದ ಕಾರ್ಯಕ್ಕೆ ಆಗಮಿಸಿದ್ದ ಹೇಮಾ ಚೌಧರಿ ಅವರು, ವಿನೋದ್ ರಾಜ್ಗೆ ಸಾಂತ್ವನ ಹೇಳಿದ್ದರು.
ಆದರೆ ಇದೀಗ ಅವರಿಗೆ ಹಠಾತ್ ಆರೋಗ್ಯ ಸಮಸ್ಯೆ ಎದುರಾಗಿದೆ. 70ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಹೇಮಾ ಚೌಧರಿಯವರು ನೂರಾರು ಸಿನಿಮಾಗಳಲ್ಲಿ ನಟಿಸಿದರು. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ಧಾರಾವಾಹಿಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ನಟಿ ಹೇಮಾ ಅವರಿಗೆ ಅನಾರೋಗ್ಯ ಸಮಸ್ಯೆಯಾಗಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.