ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ. ಯಶೋವರ್ಮ ಅವರು ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಅನಾರೋಗ್ಯ ಹಿನ್ನೆಲೆಯಲ್ಲಿ ಸಿಂಗಾಪುರಕ್ಕೆ ತೆರಳಿದ್ದ ಅವರು ಸಿಂಗಾಪುರದಲ್ಲೇ ನಿಧನರಾಗಿದ್ದಾರೆ. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಇವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಅವರ ಪತ್ನಿ ಹೇಮಾವತಿ ವಿ. ಹೆಗ್ಗಡೆ ಅವರ ಸಹೋದರ.
ಪೆರಾಡಿ ಬೀಡು ಮನೆತನದವರಾದ ಯಶೋವರ್ಮ ಅವರು ಮೂಡುಬಿದಿರೆ ಜೈನ್ ಹೈಸ್ಕೂಲಿನ ‘ಕನ್ನಡ ಪಂಡಿತ’ರೆಂದೇ ಚಿರಪರಿಚಿತರಾಗಿದ್ದ ದಿವಂಗತ ಟಿ. ರಘು ಚಂದ್ರ ಶೆಟ್ಟಿ ಅವರ ಪುತ್ರ.
ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು ಧಾರವಾಡದಲ್ಲಿ ಜೆಎಸ್ಎಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಬಳಿಕ ಉಜಿರೆಯ ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು. ನಿವೃತ್ತರಾದ ಬಳಿಕ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದರು.
1986ರಲ್ಲಿ ಸೈಕಾಲಜಿ ಕ್ಷೇತ್ರದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದ ಅವರು ಸಸ್ಯಶಾಸ್ತ್ರದ ತೀವ್ರ ಉತ್ಸಾಹಿ. ಈ ವಿಷಯದ ಕುರಿತಾಗಿ ಮತ್ತಷ್ಟು ಡಿಮಿಸ್ಟಿಫಿನೇಶನ್ ಗೆ ನಿರಂತರವಾಗಿ ಮಾಡಿದ ಕೆಲಸ ಫಲಿತಾಂಶ ರೂಪದಲ್ಲಿ ಕಂಡು ಬಂದಿವೆ. ಅವರ ಹೆಸರಿನಲ್ಲಿ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಕಟಣೆಗಳೂ ಬಂದಿವೆ. ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಹಲವಾರು ಸಮ್ಮೇಳನಗಳನ್ನು ಕೂಡ ನಡೆಸಿದ್ದರು.
ಡಾ.ಬಿ. ಯಶೋವರ್ಮ ಅವರು ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಂಶುಪಾಲರ ಸಂಘದ ಅಧ್ಯಕ್ಷರು ಸೇರಿದಂತೆ ಹಲವಾರು ಹುದ್ದೆಗಳ ಮೂಲಕ ಸೇವೆ ಸಲ್ಲಿಸಿದ್ದರು. ಎಸ್ಡಿಎಂಸಿ ಉಜಿರೆಯ ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ಕಾಲೇಜು ನ್ಯಾಕ್ನಿಂದ ಸತತ ಮೂರು ಬಾರಿ ‘ಎ’ ದರ್ಜೆಯ ಮಾನ್ಯತೆ ಪಡೆದಿತ್ತು. ಕಾಲೇಜು FJEI ಸ್ಥಾಪಿಸಿದ ಅತ್ಯುತ್ತಮ ಕಾಲೇಜಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಪಡೆಯಿತು.
ಡಾ. ಬಿ ಯಶೋವರ್ಮಅವರು, ಎಸ್ಡಿಎಂಇ ಸೊಸೈಟಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಲ್ಲರೂ ಪ್ರೀತಿಸುವ ಮತ್ತು ಗೌರವಿಸುವ ವ್ಯಕ್ತಿ. ದೀರ್ಘಕಾಲದ ವರೆಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಅಥವಾ ಎಸ್ ಡಿಎಂ ಕಾಲೇಜಿನ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸಿದ್ದರು.
ಡಾ.ಬಿ ಯಶೋವರ್ಮ ತಮ್ಮ ಸ್ನೇಹಪರ ವ್ಯಕ್ತಿತ್ವ, ನಗುಮೊಗದಿಂದಲೇ ಉಜಿರೆಯಲ್ಲಿ ಕಲಿಯುತ್ತಿದ್ದ ವಿದ್ವಾರ್ಥಿಗಳಿಗೆ ಕಾಣುತ್ತಿದ್ದ ಅವರು, ಸಂಸ್ಥೆ ಮಾಜಿ ವಿದ್ಯಾರ್ಥಿಗಳೊಂದಿಗೂ ಅಷ್ಟೇ ಒಡನಾಟ ಹೊಂದಿದ್ದರು. ತಮ್ಮ ಭಾಷಣಗಳಲ್ಲಿ ಹಾಗೂ ಬದುಕಿನಲ್ಲಿ ಮೌಲ್ಯಗಳಿಗೆ ಹೆಚ್ಚಿನ ಬೆಲೆ ನೀಡುತ್ತಿದ್ದ ಯಶೋವರ್ಮ ಅವರ ನಿಧನಕ್ಕೆ ಹಾಲಿ ಹಾಗೂ ಮಾಜಿ ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.