ಅಯೋಧ್ಯೆಯಲ್ಲಿರುವ ಮಸೀದಿಗಳ ಮುಂದೆ ಮಾಂಸ, ಪವಿತ್ರ ಗ್ರಂಥಗಳು ಸೇರಿದಂತೆ ಆಕ್ಷೇಪಾರ್ಹ ವಸ್ತುಗಳನ್ನು ಎಸೆದು ಗಲಭೆ ಸೃಷ್ಟಿಸಲು ಯತ್ನ ನಡೆಸಿದ್ದ 7 ಜನ ಹಿಂದುಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಮಸೀದಿಗಳ ಹೊರಗೆ ಹಸಿಮಾಂಸವನ್ನು ಸೇರಿದಂತೆ ಪವಿತ್ರ ಗ್ರಂಥದ ಚೂರುಗಳನ್ನು ಆರೋಪಿಗಳು ಎಸೆದು ಗಲಭೆಗೆ ಯೋಜನೆ ಹಾಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದು, ಸದ್ಯ, ಮಸೀದಿ ಆವರಣದಿಂದ ಆಕ್ಷೇಪಾರ್ಹ ವಸ್ತುಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳನ್ನು ಪ್ರತ್ಯೂಷ್ ಶ್ರೀವಾಸ್ತವ, ನಿತಿನ್ ಕುಮಾರ್, ದೀಪಕ್ ಕುಮಾರ್ ಗೌಡ್, ಬ್ರಿಜೇಶ್ ಪಾಂಡೆ, ಶತ್ರುಘ್ನ ಪ್ರಜಾಪತಿ ಮತ್ತು ವಿಮಲ್ ಪಾಂಡೆ ಎಂದು ಗುರ್ತಿಸಲಾಗಿದ್ದು, ಸಂಚಿನ ಮಾಸ್ಟರ್ ಮೈಂಡ್ ಹಿಂದಿ ಅಯೋಧ್ಯೆ ಸಂಘಟನೆ ಮುಖ್ಯಸ್ಥ ಮಹೇಶ್ ಕುಮಾರ್ ಮಿಶ್ರಾ ಅವರು ಹೇಳಿದ್ದಾರೆ.
ಪಿತೂರಿಯ ಭಾಗವಾಗಿರುವ 11 ಜನರನ್ನು ಗುರುತಿಸಲಾಗಿದೆ ಮತ್ತು ಪ್ರಸ್ತುತ ತಲೆಮರೆಸಿಕೊಂಡಿರುವ ಇತರ ನಾಲ್ವರನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿಯ ಜಹಾಂಗೀರ್ಪುರಿ ಘಟನೆಯನ್ನು ವಿರೋಧಿಸಿ ಈ ಸಂಚು ರೂಪಿಸಲಾಗಿದೆ ಎಂದೂ ಹೇಳಲಾಗಿದೆ.
ಪವಿತ್ರ ಸ್ಥಳಗಳ ಹೊರಗೆ ಆಕ್ಷೇಪಾರ್ಹ ವಸ್ತುಗಳನ್ನು ಎಸೆಯುವ ಮೂಲಕ ಎಂಟು ಜನರು ಪ್ರದೇಶದಲ್ಲಿ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ. ಅವರಿಂದ ನಾಲ್ಕು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ, ಅವರಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದ್ದು, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಅಯೋಧ್ಯೆಯ ಎಸ್ಎಸ್ಪಿ ಶೈಲೇಶ್ ಪಾಂಡೆ ಹೇಳಿದ್ದಾರೆ.