ಭಾರತ ಅಂಡರ್ 17 ಫುಟ್‌ಬಾಲ್ ತಂಡದಲ್ಲಿ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದ್ದು, ಆರೋಪ ಕೇಳಿಬಂದಿರುವ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ರನ್ನು ಅಮಾನತುಗೊಳಿಸಲಾಗಿದೆ.
ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ವ್ಯವಹಾರಗಳನ್ನು ನಿರ್ವಹಿಸುವ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಘಟನೆಯ ಬಗ್ಗೆ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (ಎಸ್‌ಎಐ) ಮಾಹಿತಿ ನೀಡಿದೆ.
ಭಾರತದ ಅಂಡರ್-16 ಮಹಿಳಾ ತಂಡದ ಫುಟ್ಬಾಲ್ ಆಟಗಾರ್ತಿಯೊಬ್ಬರಿಗೆ ತಂಡದ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಪ್ರಸ್ತುತ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ನಾರ್ವೆಯಲ್ಲಿದ್ದು, ಈ ಕೂಡಲೇ ದೇಶಕ್ಕೆ ಮರಳುವಂತೆ ಸೂಚಿಸಲಾಗಿದೆ.
“ಅಂಬ್ರೋಸ್ ದುರ್ನಡತೆಯ ಆರೋಪ ಹೊತ್ತಿದ್ದು, ಈ ಸಂಬಂಧ ರಾಷ್ಟ್ರೀಯ ತಂಡದ ಫುಟ್ಬಾಲ್ ಆಟಗಾರರೊಬ್ಬರು ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಅವರು ದೇಶಕ್ಕೆ ಮರಳುತ್ತಿದ್ದಾರೆ. ತಂಡದೊಂದಿಗಿನ ಎಲ್ಲಾ ಸಂಪರ್ಕಗಳನ್ನು ನಿಲ್ಲಿಸಲು, ತಕ್ಷಣವೇ ಭಾರತಕ್ಕೆ ಹಿಂತಿರುಗಲು ಮತ್ತು ಅವರು ಆಗಮನದ ನಂತರ ಹೆಚ್ಚಿನ ತನಿಖೆಗಾಗಿ ದೈಹಿಕವಾಗಿ ಹಾಜರಾಗಲು AIFF ಆರೋಪಿ ಕೋಚ್ ಗೆ ಸೂಚನೆ ನೀಡಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.