ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ವಿರುದ್ಧ ಮಾದಕ ದ್ರವ್ಯ ಸಾಗಾಟ ಜಾಲದ ಒಳಸಂಚಿನ ಅಥವಾ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸಾಗಾಟದಲ್ಲಿ ಭಾಗಿ ಆಗಿರುವ ಒಳಸಂಚಿನ ಬಗ್ಗೆ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ರಾಷ್ಟ್ರೀಯ ಮಾದಕ ದ್ರವ್ಯ ದಳ ನೇಮಿಸಿದ್ದ ವಿಶೇಷ ತನಿಖಾ ತಂಡದ ಪ್ರಾಥಮಿಕ ತನಿಖೆಯಲ್ಲಿ ಪತ್ತೆ ಆಗಿದೆ ಎಂದು ಪ್ರಮುಖ ಇಂಗ್ಲೀಷ್ ದೈನಿಕ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಅಲ್ಲದೇ ಮುಂಬೈನ ಕೊರೆಡೆಲಿಯಾದಲ್ಲಿ ಐಷಾರಾಮಿ ಹಡಗಿನ ಮೇಲೆ ಎನ್ಸಿಬಿ ನಡೆಸಿದ್ದ ದಾಳಿಯಲ್ಲಿ ಹಲವು ಲೋಪಗಳು ಆಗಿವೆ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಎನ್ಸಿಬಿ ಪ್ರಾದೇಶಿಕ ನಿರ್ದೇಶಕ ಆಗಿದ್ದ ಸಮೀರ್ ವಾಖೆಂಡೆ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಈ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಎನ್ಸಿಬಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.
`ಆರ್ಯನ್ ಖಾನ್ ಬಳಿ ಯಾವುದೇ ಮಾದಕ ದ್ರವ್ಯ ಪತ್ತೆ ಆಗಿರಲಿಲ್ಲ. ಆತ ಮಾಡಿರುವ ಚ್ಯಾಟ್ ನಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಜಾಲದಲ್ಲಿ ಭಾಗಿ ಆಗಿದ್ದಾನೆ ಎಂಬ ಬಗ್ಗೆ ಸಾಕ್ಷ್ಯಗಳು ಸಿಕ್ಕಿಲ್ಲ. ದಾಳಿ ವೇಳೆ ಎನ್ಸಿಬಿಯ ಸಂಹಿತೆಯಂತೆ ದಾಳಿಯನ್ನು ವೀಡಿಯೋ ಚಿತ್ರೀಕರಣ ಮಾಡಲಾಗಿಲ್ಲ. ಆತನ ಬಳಿ ಮಾದಕ ದ್ರವ್ಯ ಸಿಗದೇ ಇರುವಾಗ ಆತನ ಫೋನ್ ವಶಪಡಿಸಿಕೊಳ್ಳುವ ಅಗತ್ಯವಿರಲಿಲ್ಲ’ ಎಸ್ಐಟಿ ಅಭಿಪ್ರಾಯಪಟ್ಟಿದೆ ಎಂದು ವರದಿ ಆಗಿದೆ.
ಕಳೆದ ವರ್ಷದ ಅಕ್ಟೋಬರ್ 2ರಂದು ಸಮೀರ್ ವಾಖೆಂಡೆ ನೇತೃತ್ವದ ಎನ್ಸಿಬಿ ತಂಡ ದಾಳಿ ಮುಂಬೈನಲ್ಲಿ ದಾಳಿ ಮಾಡಿತ್ತು. ಹಡಗಿನಲ್ಲಿ ಪಾರ್ಟಿ ಮಾಡುತ್ತಿದ್ದವರಿಂದ 13 ಗ್ರಾಂ ಕೊಕೇನ್, ಐದು ಗ್ರಾಂ ಮೆಫೆಡ್ರೋನ್, 21 ಗ್ರಾಂ ಮರಿಜುವಾನಾ, 22 ಎನ್ಡಿಎಂಎ ಮಾತ್ರೆಗಳನ್ನು ಮತ್ತು 1.33 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾಗಿ ಹೇಳಿತ್ತು.
ದಾಳಿ ವೇಳೆ ಬಂಧಿತರಾಗಿದ್ದವರು, ಸಾಕ್ಷಿöಗಳು, ದಾಳಿಯಲ್ಲಿ ಭಾಗಿ ಆಗಿದ್ದ ಮುಂಬೈನ ಎನ್ಸಿಬಿ ಘಟಕದ ಅಧಿಕಾರಿಗಳನ್ನು ಎಸ್ಐಟಿ ವಿಚಾರಣೆಗೆ ಒಳಪಡಿಸಿತ್ತು. ಎಸ್ಐಟಿ ವಿಚಾರಣೆ ವೇಳೆ ಆರ್ಯನ್ ಖಾನ್ ತನ್ನ ಸ್ನೇಹಿತ ಅರ್ಬಜ್ ಮರ್ಜೆಂಟ್ಗೆ ಹಡಗಿಗೆ ಮಾದಕ ದ್ರವ್ಯ ತರುವಂತೆ ಹೇಳಿದ್ದ ಎಂಬುದಕ್ಕೂ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಎಸ್ಐಟಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.