ಬಿಸಿಯೂಟ ಯೋಜನೆಗೆ ಶಿವಕುಮಾರ ಸ್ವಾಮೀಜಿಗಳ ಹೆಸರು ಇಡಬೇಕು ಎಂದು ಬಿ.ವೈ ವಿಜಯೇಂದ್ರ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು. ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಬಿಸಿಯೂಟ ಯೋಜನೆಗೆ ‘ಶಿವಕುಮಾರ ಶ್ರೀ’ ಹೆಸರು ನಾಮಕರಣ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಇಂದು ಸಿದ್ದಗಂಗಾ ಮಠದಲ್ಲಿ ಶ್ರೀಗಳ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ಬಿವೈ ವಿಜಯೇಂದ್ರ ಅವರು, ಇಂದು ಸಂಭ್ರಮ ಸಡಗರದ ದಿನ. ವಿಶ್ವದಲ್ಲಿ ಪೂಜಿಸಿದ ಪುಣ್ಯಪುರುಷ, ಆಧುನಿಕ ಬಸವಣ್ಣ ಸಿದ್ದಗಂಗಾ ಶ್ರೀಗಳು. ತ್ರಿವಿಧ ದಾಸೋಹಿಗಳ ಜನ್ಮ ದಿನೋತ್ಸವ. ಸರ್ದಾರ್ ಪಟೇಲ್ ನಂತರ ಧೀಮಂತ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಇಂದು ಗೃಹ ಸಚಿವರು ಮಾತ್ರ ಆಗಿರದೇ, ಮಠದ ಭಕ್ತರಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಎಂದರು.
ಅನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿಯವರು, ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ನಡೆದಾಡಿದ ನೆಲದಲ್ಲಿ ಸ್ಪೂರ್ತಿ, ಹೆಮ್ಮೆ ಇದೆ. ಸುಮಾರು 88 ವರ್ಷ ಈ ಮಠದ ಸೇವೆ ಮಾಡಿದ್ದಾರೆ. ಇದು ದಾಖಲೆ. ಇಡಿ ದೇಶದಲ್ಲೇ ಈ ಕೆಲಸ ಯಾರು ಮಾಡಿಲ್ಲ. ಆ ದಾಖಲೆ ನಮ್ಮ ಶಿವಕುಮಾರ ಸ್ವಾಮಿಗಳು ಮಾಡಿದ್ದಾರೆ. ಶ್ರೀಗಳು ಹಚ್ಚಿದ ಒಲೆಯ ಕಿಚ್ಚು ನಿರಂತರವಾಗಿ ನಡೆಯುತ್ತಿವೆ. ಅವರು ನಮ್ಮ ನಡುವೆ ಜೀವಂತ ಆಗಿದ್ದಾರೆ. ಅವರು ದೈಹಿಕವಾಗಿ ಇಲ್ಲದೆ ಇದ್ದರೂ ಅವರ ನಡೆ ಗೌರವ ನಮ್ಮ ಜೊತೆ ಸದಾ ಇರುತ್ತದೆ. ಬದುಕನ್ನು ಕಟ್ಟಿಕೊಟ್ಟ ಪರಮಪೂಜ್ಯರು ಅವರು. ಎಲ್ಲಾ ಸಮುದಾಯದ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಸ್ವಾಮೀಜಿಯವರು ಯಾವುದೇ ಜಾತಿ ಬೇದ ಮಾಡಿಲ್ಲ. ಸರ್ವೋದಯ ಅಂತ್ಯೋದಯ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ವೇಳೆ, ಸರ್ಕಾರದ ಮಧ್ಯಾಹ್ಯದ ಬಿಸಿ ಊಟದ ಯೋಜನೆಗೆ ಶಿವಕುಮಾರ ಸ್ವಾಮೀಜಿ ಹೆಸರು ಇಡಲು ಸರ್ಕಾರ ಮುಂದಾಗುತ್ತೆ ಎಂದು ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಯಡಿಯೂರಪ್ಪ ಅವರು ಜನವರಿ 31 ನ್ನು ದಾಸೋಹ ದಿನ ಅಂತ ಘೋಷಣೆ ಮಾಡಬೇಕು ಅಂತ ಸಿಎಂಗೆ ಮನವಿ ಮಾಡಿದ್ರು. ಇದಕ್ಕೆ ಸಿಎಂ ಒಪ್ಪಿಗೆ ನೀಡಿದ್ದರು. ಇದೀಗ, ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಶಿವಕುಮಾರ ಶ್ರೀ ಎಂದು ನಾಮಕರಣ ಮಾಡಲಾಗಿದೆ.