ರಾಜ್ಯ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡಿ ಆ ಮೂಲಕ ರಾಜಕೀಯ ಲಾಭ ಪಡೆಯುವ ಹವಣಿಕೆಯಲ್ಲಿದೆ. ಕೋಮು ಸಾಮರಸ್ಯ ಕದಡುವ ಸಂಘಟನೆಗಳ ವಿರುದ್ದ ಕ್ರಮ ಕೈಗೊಳ್ಳದ ಸಿಎಂ ಬೊಮ್ಮಾಯಿ ಅಸಮರ್ಥರೇ..? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಮಾಜದ ಕೋಮು ಸಾಮರಸ್ಯ ಕದಡುವಂತಹ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಾ, ಆ ಮೂಲಕ ರಾಜಕೀಯ ಲಾಭ ಪಡೆಯುವ ಹವಣಿಕೆಯಲ್ಲಿದೆ. ಈ ಲೆಕ್ಕಾಚಾರವೇ ಮುಂದೆ ಬಿಜೆಪಿಗೆ ತಿರುಗುಬಾಣವಾಗಲಿದೆ.
ಮಂದಿರ, ಮಸೀದಿ, ಚರ್ಚು ಎಲ್ಲಾ ಕಡೆ ಧ್ವನಿ ವರ್ಧಕಗಳನ್ನು ಹಾಕುತ್ತಾರೆ, ಇದರಿಂದ ಇಷ್ಟುದಿನ ಯಾರಿಗೆ ತೊಂದರೆ ಆಗಿತ್ತು? ಕಣ್ಣೆದುರೇ ಸಮಾಜದ ಸಾಮರಸ್ಯ ಕುಸಿದುಬೀಳುತ್ತಿದ್ದರೂ, ಅದಕ್ಕೆ ಕಾರಣವಾದ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗದಷ್ಟು ಸಿಎಂ ಬೊಮ್ಮಾಯಿ ಅವರು ಅಸಮರ್ಥರೇ?
ದಿನೇ ದಿನೆ ರಾಜ್ಯದಲ್ಲಿ ಇಷ್ಟೊಂದು ಅಶಾಂತಿ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಈ ಬಗ್ಗೆ ಮಾತನಾಡದ ಮುಖ್ಯಮಂತ್ರಿ ಬೊಮ್ಮಾಯಿ ಅವರದು ಈ ಎಲ್ಲಾ ಸಮಾಜ ವಿರೋಧಿ ಕೃತ್ಯಗಳಿಗೆ ಸಹಮತವೋ ಅಥವಾ ಕಾನೂನು ಕ್ರಮ ಜರುಗಿಸಲಾಗದ ಅಸಹಾಯಕತೆಯೋ?
ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ರಾಜ್ಯದ ಹಿತಾಸಕ್ತಿ ಮತ್ತು ಜನರ ಭವಿಷ್ಯದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವ ಮುನ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗುವುದು ಒಳಿತು ಎಂದು ಸಿದ್ದರಾಮಯ್ಯ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.