ಬಳ್ಳಾರಿಯಲ್ಲಿ ಗಣಿಗಾರಿಕೆ ಆರಂಭ ಸಂಬಂಧ ಕೇಂದ್ರ ಉಕ್ಕು ಸಚಿವರೂ ಆಗಿರುವ ಬೃಹತ್ ಕೈಗಾರಿಕೆ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಸಹಿ ಹಾಕಿದ್ದಾರೆ.
ಈ ಬಗ್ಗೆ ಸ್ವತಃ ಹೆಚ್ಡಿಕೆ ಅವರೇ ಮಾಹಿತಿ ನೀಡಿದ್ದಾರೆ.
ಕೇಂದ್ರದ @SteelMinIndia ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಕಡತಕ್ಕೆ ಸಹಿ ಹಾಕಿದೆ. ಅದು ಕರ್ನಾಟಕಕ್ಕೆ ಸಂಬಂಧಿಸಿದ ಕಡತ ಎನ್ನುವುದು ವಿಶೇಷ
ಎಂದು ಕುಮಾರಸ್ವಾಮಿ ಮಾಹಿತಿ ಹಂಚಿಕೊಂಡಿದ್ದಾರೆ.
ಉಕ್ಕು ಸಚಿವರಾಗಿ ಕುಮಾರಸ್ವಾಮಿ ಅವರು ಕಡತಕ್ಕೆ ಸಹಿ ಹಾಕುವುದರೊಂದಿಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿಯಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆ ಆರಂಭವಾಗಲಿದೆ.
ಕಳೆದ ವರ್ಷವೇ ಸಾರ್ವಜನಿಕ ಸ್ವಾಮ್ಯದ ಕುದುರೆಮುಖ ಕಬ್ಬಿಣದ ಅದಿರು ಕಂಪನಿ 388 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ಆರಂಭ ಸಂಬಂಧ ಅನುಮತಿ ಕೇಳಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು.
ಅರಣ್ಯ ಪ್ರದೇಶದಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆ ಆರಂಭಿಸುವ ಸಂಬಂಧ 2018ರ ಮಾರ್ಚ್ನಲ್ಲಿ ಭಾರತೀಯ ಗಣಿ ಬ್ಯೂರೋದಿಂದ ಅನುಮತಿ ಪಡೆದಿತ್ತು. ಅದಾದ ಬಳಿಕ 2021ರ ಆಗಸ್ಟ್ನಲ್ಲಿ ಕೇಂದ್ರ ಪರಿಸರ ಸಚಿವಾಲಯ ಅನುಮತಿ ನೀಡಿತ್ತು. 2022ರ ಜುಲೈನಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಒಪ್ಪಿಗೆ ನೀಡಿತ್ತು.
ಕಳೆದ ವರ್ಷದ ಜನವರಿಯಲ್ಲಿ ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸ್ ಅದಿರಿನ ಗಣಿಗಾರಿಕೆ ಸಂಬಂಧ 50 ವರ್ಷದ ಗುತ್ತಿಗೆಗೆ ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರ ನಡುವೆ ಒಪ್ಪಂದವೂ ಆಗಿತ್ತು.
ADVERTISEMENT
ADVERTISEMENT