ಪಠ್ಯದಿಂದ ಟಿಪ್ಪು ಸುಲ್ತಾನ್ ಕುರಿತ ಪಾಠಗಳನ್ನು ತೆಗೆದಿಲ್ಲ. ಮೈಸೂರು ಹುಲಿ ಎಂಬ ಬಿರುದು ಕೂಡ ಉಳಿಸಿಕೊಳ್ಳಲಾಗಿದೆ. ಆದರೆ, ಸಾಕ್ಷ್ಯವಿಲ್ಲದ ವಿಚಾರಗಳನ್ನು ಮಾತ್ರ ಕೈಬಿಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಅಪ್ಪಚ್ಚು ರಂಜನ್ ಅವರು ಟಿಪ್ಪು ಪಠ್ಯವನ್ನು ಸಂಪೂರ್ಣವಾಗಿ ಕೈಬಿಡಿ ಅಥವಾ ಟಿಪ್ಪುವಿನ ಮತ್ತೂಂದು ಮುಖವನ್ನು ಕೂಡ ಪರಿಚಯಿಸುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ, ಆಧಾರವಿಲ್ಲದ ವಿಚಾರಗಳನ್ನು ಕೈಬಿಡಲಾಗಿದ್ದು, ಪಾಠವನ್ನು ಉಳಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಶಾಸಕ ಅಪ್ಪಚ್ಚು ರಂಜನ್ ಅವರು ಟಿಪ್ಪುವಿನ ಕುರಿತ ಪಠ್ಯ ಕೈಬಿಡಬೇಕು. ಉಳಿಸಿದರೆ ಆತನ ಎಲ್ಲ ಅಂಶವನ್ನು ಸೇರಿಸಬೇಕು ಎಂದು ಒತ್ತಾಯಿಸಿದ್ದರು. ಅವರು ಪೂರಕವಾದ ಮಾಹಿತಿಗಳನ್ನೂ ನೀಡಿದ್ದಾರೆ. ಟಿಪ್ಪು ಆಡಳಿತದಲ್ಲಿ ಕನ್ನಡ ತೆಗೆದು ಪರ್ಷಿಯನ್ ಭಾಷೆ ಜಾರಿ ತಂದದ್ದು ಮತ್ತು ಕೊಡವರ ಮೇಲೆ ದೌರ್ಜನ್ಯ ಎಸಗಿದ ಬಗ್ಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ವಿವರಿಸಿದರು. ರಚನೆಯಾಗಿರುವ ಸಮಿತಿಯು ಟಿಪ್ಪು ಬಗ್ಗೆ ಏನಿರಬೇಕು ಮತ್ತು ಪುಸ್ತಕದಿಂದ ಏನನ್ನು ತೆಗೆದುಹಾಕಬೇಕು ಎಂಬುದನ್ನು ನಿರ್ಧರಿಸಲಿದೆ, ಈ ಸಂಬಂಧ ಮುಂದಿನ ವಾರ ತಿಳಿಸಲಾಗುವುದು ಎಂದರು.