‘ಯಾರೋ ಏನೋ ಹೇಳಿದರೆ ಅದಕ್ಕೆ ನಾನು ಮಹತ್ವ ಕೊಡುವುದಿಲ್ಲ’ ಬಿಹಾರದಲ್ಲಿ ನಾವು ಒಳ್ಳೆಯದನ್ನು ಮಾಡಿದ್ದೇವೋ ಇಲ್ಲವೋ ಎಂಬುದು ಜನತೆಗೆ ತಿಳಿದಿದೆ. ನಮಗೆ ಯಾರೊಬ್ಬರ ಅಭಿಪ್ರಾಯ ಮುಖ್ಯವಲ್ಲ. ಸತ್ಯ ಅಷ್ಟೇ ನಮಗೆ ಮುಖ್ಯ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಪ್ರಶಾಂತ್ ಕಿಶೋರ್ ಅವರು ರಾಜಕೀಯ ಪಕ್ಷಗಳ ಗೆಲುವಿಗೆ ರಣತಂತ್ರ ರೂಪಿಸುವ ಕೆಲಸ ಬಿಟ್ಟು ಈಗ ನೇರವಾಗಿ ರಾಜಕೀಯಕ್ಕೆ ಧುಮುಕಲು ಮುಂದಾಗಿದ್ದಾರೆ. ಅವರ ಆಡಳಿತದ ಅನುಚಿತ ಮೌಲ್ಯಮಾಪನಕ್ಕೆ ತಾವು ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಪ್ರಶಾಂತ್ ಕಿಶೋರ್ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಹಾರ ಸಿಎಂ, ರಾಜ್ಯದಲ್ಲಿ ಕಳೆದ 15 ವರ್ಷಗಳಲ್ಲಿ ಏನಾಗಿದೆ ಎಂಬುದು ನಿಮಗೆ ತಿಳಿದಿರುವ ಕಾರಣ, ಪ್ರಶಾಂತ್ ಕಿಶೋರ್ ಅವರಿಗೆ ಪ್ರತಿಕ್ರಿಯೆಯನ್ನು ನೀವೇ ನೀಡಬೇಕೆಂದು ನಾನು ವಿನಂತಿಸುತ್ತೇನೆ. ಯಾರಾದರೂ ಏನಾದರೂ ಹೇಳಿದಾಗ, ಅದಕ್ಕೆ ನಾವು ಪ್ರತಿಕ್ರಿಯಿಸಬೇಕು. ಆದರೆ, ಈ ಸಂದರ್ಭದಲ್ಲಿ ಅದನ್ನು ನೀವೇ ಮಾಡಬಹುದು. ಏಕೆಂದರೆ, ವಾಸ್ತವ ಏನೆಂದು ನಿಮಗೆ ಗೊತ್ತಿದೆ ಎಂದಿದ್ದಾರೆ.
ಲಾಲು ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಅವರು ಬಿಹಾರವನ್ನು 30 ವರ್ಷ ಆಳಿದ್ದರೂ ಬಿಹಾರ ದೇಶದ ಅತ್ಯಂತ ಹಿಂದುಳಿದ ಮತ್ತು ಬಡ ರಾಜ್ಯವಾಗಿ ಉಳಿದಿರುವುದು ಸತ್ಯ ಎಂದು ಪ್ರಶಾಂತ್ ಕಿಶೋರ್ ಟೀಕಿಸಿದ್ದರು.