ಕಾಂಗ್ರೆಸ್ ಹೈಕಮಾಂಡ್ ಮತ್ತು G-23 ಬಣದ ನಾಯಕರ ಮಧ್ಯೆ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಹೆಚ್ಚು ಕಡಿಮೆ ಬ್ರೇಕ್ ಬಿದ್ದಿದೆ. ಸತತ ಎರಡನೇ ಸಂಜೆ AICC ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಗುಲಾಮ್ ನಬಿ ಅಜಾದ್ ಭೇಟಿ ಮಾಡಿದ್ದು, ಮಹತ್ವದ ಡೀಲ್ ನಡೆದಿದೆ.
ಸಾಂಸ್ಥಿಕವಾಗಿ ಪಕ್ಷದಲ್ಲಿ ಪ್ರಮುಖ ಬದಲಾವಣೆಗಳ ಜೊತೆಗೆ G-23 ನಾಯಕರಿಗೆ ಪಕ್ಷದಲ್ಲಿ ಜವಾಬ್ದಾರಿ ಹೋರಿಸಲು ಸೋನಿಯಾ ಗಾಂಧಿ ತೀರ್ಮಾನಿಸಿದ್ದಾರೆ. ಗುಲಾಮ್ ನಬಿ ಅಜಾದ್ ನೀಡಿದ ಹಲವು ಸಲಹೆ ಸೂಚನೆಗಳಿಗೆ ಸೋನಿಯಾ ಗಾಂಧಿ ಕೂಡಾ ಒಪ್ಪಿಗೆ ಸೂಚಿಸಿದ್ದಾರೆ.
ಗುಲಾಮ್ ನಬಿ ಅಜಾದ್ ಅವರಿಗೆ ಕರ್ನಾಟಕ ಕಾಂಗ್ರೆಸ್ ನ ಉಸ್ತುವಾರಿ ನೀಡಲು ತೀರ್ಮಾನಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇರುವ ಕರ್ನಾಟಕದಲ್ಲಿ ಪಕ್ಷಕ್ಕೆ ಇನ್ನಷ್ಟು, ಚೈತನ್ಯ ಬಲ ತುಂಬಲು ನೀವು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಅಜಾದ್ ಅವರಿಗೆ ಸೋನಿಯಾ ಗಾಂಧಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮುಂದಿನ ವರ್ಷದ ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಗೆ ಚುನಾವಣೆ ನಡೆಯಬೇಕಿದೆ. ಆದರೆ, ಬಿಜೆಪಿ ವೇಗ ನೋಡಿದರೇ ಈ ವರ್ಷದ ಕೊನೆಯಲ್ಲಿಯೇ ರಾಜ್ಯದಲ್ಲೂ ಚುನಾವಣೆ ನಡೆಯಬಹುದು ಎಂಬ ಸುದ್ದಿ ಹಬ್ಬಿದೆ.
ಹೀಗಾಗಿ ಅಲರ್ಟ್ ಆಗಿರುವ ಸೋನಿಯಾ ಗಾಂಧಿ ಕರ್ನಾಟಕದಲ್ಲಿ ಪಕ್ಷಕ್ಕೆ ಚುರುಕು ಮುಟ್ಟಿಸಲು ಅಜಾದ್ ರನ್ನು ಆಯ್ಕೆ ಮಾಡಿದ್ದಾರೆ. ಒಂದೆರಡು ದಿನದಲ್ಲಿ ಆಜಾದ್ ನೇಮಕ ಅಧಿಕೃತಗೊಳ್ಳಬಹುದು ಎನ್ನಲಾಗುತ್ತಿದೆ.
ಅಜಾದ್ ಸೇವೆಯನ್ನು ರಾಜ್ಯಸಭೆಯಲ್ಲೂ ಬಳಸಿಕೊಳ್ಳಲ್ಲೂ ತೀರ್ಮಾನಿಸಿರುವ ಸೋನಿಯಾ ಗಾಂಧಿ, ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಅಜಾದ್ ರನ್ನು ಕರ್ನಾಟಕದಿಂದಲೇ ಸಂಸತ್ತು ಮೆಲ್ಮನೆಗೆ ಆಯ್ಕೆ ಮಾಡಿ ಕಳಿಸಲು ಮುಂದಾಗಿದ್ದಾರೆ.
ಹಾಗೆಯೇ ಮತ್ತೊಬ್ಬ ಅಸಮಾಧಾನಿತ ನಾಯಕ ಅನಂದ್ ಶರ್ಮಾರನ್ನು ಸಹ ರಾಜ್ಯಸಭೆಗೆ ಕಳಿಸಲು ಸೋನಿಯಾ ಗಾಂಧಿ ಪ್ಲಾನ್ ಮಾಡಿದ್ದಾರೆ.
ಹೊಸದಾಗಿ G-23 ಬಣದಲ್ಲಿ ಕಾಣಿಸಿಕೊಂಡಿದ್ದ ಭೂಪಿಂದರ್ ಸಿಂಗ್ ಹುಡಾಗೆ ಹರ್ಯಾಣ ಪಿಸಿಸಿ ಚೀಫ್ ಆಗಿ ನೇಮಿಸಲು ಸೋನಿಯಾ ಗಾಂಧಿ ಒಪ್ಪಿದ್ದಾರೆ ಎನ್ನಲಾಗಿದೆ.