ಬೆಂಗಳೂರು: ನಿಗಮ, ಮಂಡಳಿ ಆಯ್ಕೆ ಪಟ್ಟಿ ಯಾವ ಕ್ಷಣದಲ್ಲಿ ಬೇಕಾದರೂ ಪ್ರಕಟವಾಗಬಹುದು. ಈ ಪಟ್ಟಿ ಮುಂದೂಡುವ ಸಾಧ್ಯತೆ ಇಲ್ಲ. ಚುನಾವಣೆ ಸಮಯದಲ್ಲಿ ನಾವು ಯಾರಿಗೆ ಮಾತು ಕೊಟ್ಟಿದ್ದೆವೋ ಅವರಿಗೆ ಸ್ಥಾನಮಾನ ನೀಡಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ಧಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ಅವರು, ಇದೇ 19 ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಇಂದಿರಾ ಭವನದಲ್ಲಿ ಪಕ್ಷದ ಲೋಕಸಭೆ ಚುನಾವಣೆ ಸಮಿತಿ ಸಭೆ ಕರೆಯಲಾಗಿದೆ ಹಾಗೂ ಜ. 21 ರಂದು ಮಂಗಳೂರಲ್ಲಿ ರಾಜ್ಯಮಟ್ಟದ ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜ. 19 ರಂದು ನಡೆಯುವ ಸಭೆಗೆ ದೆಹಲಿಯಿಂದ ವೀಕ್ಷಕರು ಕೂಡ ಆಗಮಿಸಲಿದ್ದು, ಜಿಲ್ಲಾ ಸಚಿವರು ಅಭ್ಯರ್ಥಿ ಆಯ್ಕೆ ವಿಚಾರವಾಗಿ ನೀಡಿರುವ ವರದಿ ಬಗ್ಗೆ ಚರ್ಚೆ ಮಾಡಲಾಗುವುದು. ಆದಷ್ಟು ಬೇಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಇದೇ ತಿಂಗಳು 21 ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷರು ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.