ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಿ ಹೋಗಬಹುದೇ ಎಂಬ ಬಗ್ಗೆ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ನ್ಯಾಯಮೂರ್ತಿ ಸುಧಾನ್ಶು ಧುಲಿಯಾ ಅವರಿದ್ದ ಸುಪ್ರಿಂಕೋರ್ಟ್ ಪೀಠ ಭಿನ್ನ ತೀರ್ಪು ನೀಡಿದೆ.
ಇಬ್ಬರೂ ನ್ಯಾಯಮೂರ್ತಿಗಳು ಪ್ರತ್ಯೇಕ ತೀರ್ಪು ನೀಡಿದ್ದಾರೆ.
ಮೇಲ್ಮನವಿ ವಜಾ:
ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ತಮ್ಮ ತೀರ್ಪಿನಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದು ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ್ದಾರೆ. ಹಿಜಾಬ್ ಧರಿಸುವುದು ಇಸ್ಲಾಂನ ಅವಿಭಾಜ್ಯ ಆಚರಣೆ ಅಲ್ಲ ಎಂದು ಗುಪ್ತಾ ಅವರು ತೀರ್ಪಿನಲ್ಲಿ ಹೇಳಿದ್ದಾರೆ.
ಹಿಜಾಬ್ ನಿಷೇಧ ಸರಿಯಲ್ಲ:
ನ್ಯಾಯಮೂರ್ತಿ ಸುಧಾನ್ಶು ಧುಲಿಯಾ ಅವರು ತಮ್ಮ ತೀರ್ಪಿನಲ್ಲಿ ಕರ್ನಾಟಕ ಹೈಕೋರ್ಟ್ ಹೇರಿದ್ದ ಹಿಜಾಬ್ ನಿಷೇಧವನ್ನು ವಜಾಗೊಳಿಸಿದ್ದಾರೆ. ಈ ಮೂಲಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಿ ಹೋಗಬಹುದು ಎಂದು ತೀರ್ಪು ನೀಡಿದ್ದಾರೆ.
ಹಿಜಾಬ್ ಧರಿಸಿ ಹೋಗುವುದು ಅರ್ಜಿದಾರರ ಆಯ್ಕೆಗೆ ಬಿಟ್ಟಿದ್ದು. ಹೆಣ್ಣು ಮಕ್ಕಳ ಶಿಕ್ಷಣ ಎಲ್ಲಕ್ಕಿಂತಲೂ ಮುಖ್ಯ ಎಂದು ಸುಧಾನ್ಶು ಧುಲಿಯಾ ಅವರು ತೀರ್ಪಿನಲ್ಲಿ ಹೇಳಿದ್ದಾರೆ.
ತ್ರಿಸದಸ್ಯ ಪೀಠಕ್ಕೆ ವರ್ಗ:
ಇಬ್ಬರೂ ನ್ಯಾಯಮೂರ್ತಿಗಳು ಭಿನ್ನ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣ ಈಗ ಸುಪ್ರೀಂಕೋರ್ಟ್ನ ತ್ರಿಸದಸ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾ ಆಗಲಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಈಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದೆ ಇಡಲಾಗುತ್ತದೆ. ಸಿಜೆಐ ಅವರು ಹಿಜಾಬ್ ಪ್ರಕರಣದ ವಿಚಾರಣೆ ಸಂಬಂಧ ಮೂವರು ನ್ಯಾಯಮೂರ್ತಿಗಳ ಪೀಠ ರಚಿಸಬೇಕು ಎಂದು ತೀರ್ಪಿನಲ್ಲಿ ಕೋರಲಾಗಿದೆ.