ರಾಹುಲ್ ಗಾಂಧಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಪ್ರಕರಣದಲ್ಲಿ ಜೀ ವಾಹಿನಿ ನಿರೂಪಕ (ಆ್ಯಂಕರ್) ರೋಹಿತ್ ರಂಜನ್ ಅವರನ್ನು ಗಾಜಿಯಾಬಾದ್ನ ಇಂದಿರಾಪುರಮ್ನಲ್ಲಿ ಇಂದು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಜೀ ವಾಹಿನಿಯ ವಿರುದ್ಧ ದಾಖಲಾದ ಪ್ರಕರಣದ ಬಗ್ಗೆ ಪ್ರಶ್ನಿಸಲು ಆ್ಯಂಕರ್ ರೋಹಿತ್ ರಂಜನ್ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ರಾಹುಲ್ ಗಾಂಧಿಯವರ ತಿರುಚಿದ ವಿಡಿಯೋ ಪ್ರಸಾರ ಮಾಡಿದ ಬಗ್ಗೆ ಆ್ಯಂಕರ್ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಾಹಿನಿ ಒತ್ತಾಯಿಸಿದೆ.
ಐಪಿಸಿ ಸೆಕ್ಷನ್ 505 ರ ಅಡಿಯಲ್ಲಿ ರೋಹಿತ್ ರಂಜನ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಛತ್ತೀಸ್ಗಢದ ಪೊಲೀಸರೂ ಇವರನ್ನು ವಶಕ್ಕೆ ಪಡೆದುಕೊಳ್ಳಲು ಬಂದಿದ್ದರು. ಅಷ್ಟರಲ್ಲಾಗಲೇ ನಮ್ಮ ತಂಡ ವಶಕ್ಕೆ ಪಡೆದಿತ್ತು ಎಂದು ಉತ್ತರ ಪ್ರದೇಶದ ಪೊಲೀಸರು ಹೇಳಿದ್ದಾರೆ.
ನಿರೂಪಕ ರೋಹಿತ್ ರಂಜನ್ ಅವರು ರಾಹುಲ್ ಗಾಂಧಿಯವರ ವಿಡಿಯೋವನ್ನು ತಿರುಚಿ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದರು. ಅಲ್ಲದೇ, ಈ ವಿಡಿಯೋವನ್ನು ಉದಯಪುರದ ಟೈಲರ್ ಹತ್ಯೆಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಕಾಂಗ್ರೆಸ್ ದೂರು ನೀಡಿತ್ತು.