51 ಬಿಲಿಯನ್ ಡಾಲರ್ ಮೊತ್ತದಷ್ಟು ಇಳಿಸಲಾಗದ ಸಾಲದ ಹೊರೆಯನ್ನು ಹೊತ್ತಿರುವ ದಿವಾಳಿ ದ್ವೀಪರಾಷ್ಟ್ರ ಶ್ರೀಲಂಕಾ ತಾನು ವಿದೇಶಗಳಿಂದ ತೆಗೆದುಕೊಂಡಿರುವ ಸಾಲದ ಮರು ಪಾವತಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿಬಿಟ್ಟಿದೆ. ವಿದೇಶಿ ರಾಷ್ಟ್ರಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲದ ಕಂತನ್ನು ಪಾವತಿಸುವುದನ್ನು ನಿಲ್ಲಿಸಿಬಿಟ್ಟಿದೆ.
ʻಸಾಲ ಮರು ಪಾವತಿ ಸವಾಲು ಮತ್ತು ಅಸಾಧ್ಯವಾಗಿದೆ. ಸಾಲದ ಮರು ರಚನೆ ಮತ್ತು ಸುಸ್ತಿದಾರರಾಗುವುದನ್ನು ತಪ್ಪಿಸಲು ಕ್ರಮಕೈಗೊಳ್ಳಲಾಗುತ್ತದೆʼ ಎಂದು ಶ್ರೀಲಂಕಾದ ಕೇಂದ್ರ ಬ್ಯಾಂಕ್ ಗವರ್ನರ್ ನಂದಲಾಲ್ ವೀರಸಿಂಘೇ ಹೇಳಿದ್ದಾರೆ.
ಶ್ರೀಲಂಕಾದ ವಿದೇಶಿ ವಿನಿಮಯ ಮೊತ್ತ 1.94 ಬಿಲಿಯನ್ ಡಾಲರ್ಗೆ ಕುಸಿದಿದೆ. ಈ ವರ್ಷದ ಅಂತ್ಯಕ್ಕೆ ಶ್ರೀಲಂಕಾ 4 ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿಸಬೇಕಿದೆ. ಅದರಲ್ಲಿ 1 ಬಿಲಿಯನ್ ಡಾಲರ್ ಬಾಂಡ್ಗಳ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಡೆದಿರುವ ಸಾಲವಾಗಿದ್ದು, ಈ ವರ್ಷದ ಜುಲೈಗೆ ಮೆಚ್ಯೂರು ಆಗಲಿದೆ. ಅಷ್ಟೊತ್ತಿಗೆ ಆ ಬಾಂಡ್ಗಳ ಮೇಲೆ ಅಸಲು ಮತ್ತು ಬಡ್ಡಿಯನ್ನು ಶ್ರೀಲಂಕಾ ಪಾವತಿಸಬೇಕಾಗುತ್ತದೆ.
2.2 ಕೋಟಿ ಜನಸಂಖ್ಯೆ ಇರುವ ಶ್ರೀಲಂಕಾ ಈಗ ದಿವಾಳಿ ಎದ್ದಿದ್ದು ಆಹಾರ, ವಿದ್ಯುತ್, ರಸಗೊಬ್ಬರ, ಪೆಟ್ರೋಲ್-ಡೀಸೆಲ್ ಒಳಗೊಂಡಂತೆ ಅಗತ್ಯ ಮೂಲಭೂತ ವಸ್ತುಗಳಿಗೆ ಹಾಹಾಕಾರ ಎದ್ದಿದೆ.