ದಿವಾಳಿ ಎದ್ದಿರುವ ದ್ವೀಪ ರಾಷ್ಟ್ರ ಶ್ರೀಲಂಕಾ ತನ್ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಶ್ರೀಲಂಕಾ ಏರ್ಲೈನ್ಸ್ ಖಾಸಗೀಕರಣಕ್ಕೆ ಘೋಷಿಸಿದೆ. ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೊಸ ಪ್ರಧಾನಿ ರನಿಲ್ ವಿಕ್ರಮಸಿಂಘೆ ಈ ಘೋಷಣೆ ಮಾಡಿದ್ದಾರೆ.
ಶ್ರೀಲಂಕಾ ಏರ್ಲೈನ್ಸ್ ಕಳೆದ ವರ್ಷದ ಮಾರ್ಚ್ ಅಂತ್ಯದ ವೇಳೆ 124 ದಶಲಕ್ಷ ಅಮೆರಿಕನ್ ಡಾಲರ್ ನಷ್ಟ ಅನುಭವಿಸಿತ್ತು. `ತಮ್ಮ ಜೀವಮಾನದಲ್ಲಿ ವಿಮಾನದಲ್ಲಿ ಕಾಲಿಡದ ಬಡವರು ಈ ನಷ್ಟವನ್ನು ಭರಿಸುತ್ತಿದ್ದಾರೆ’ ಎನ್ನುವ ಮೂಲಕ ಪ್ರಧಾನಿ ಅವರು ವಿಮಾನಯಾನ ಸಂಸ್ಥೆಯನ್ನು ಖಾಸಗಿಯವರಿಗೆ ಮಾರುವ ಘೋಷಣೆ ಮಾಡಿದರು.
ಇದರ ಜೊತೆಗೆ 1 ಲಕ್ಷ ಕೋಟಿ ರೂಪಾಯಿ ಮೊತ್ತದ ಹೊಸ ನೋಟುಗಳ ಮುದ್ರಣಕ್ಕೂ ನಿರ್ಧರಿಸಿದೆ. ಈ ಹಣವನ್ನು ದೇಶಕ್ಕೆ ಅಗತ್ಯವಾದ ಕಚ್ಚಾತೈಲದ ಆಮದು ಮತ್ತು ಸಂಬಳ ಪಾವತಿಗಾಗಿ ಬಳಸಿಕೊಳ್ಳಲಾಗುತ್ತದೆ.
ಕೇವಲ ಒಂದು ದಿನದ ಮಟ್ಟಿಷ್ಟೇ ಪೆಟ್ರೋಲ್ ಮತ್ತು ಅನಿಲ ಲಭ್ಯವಿದೆ ಎಂದು ಪ್ರಧಾನಿ ಹೇಳಿದ್ದಾರೆ. ಮೂರು ಹಡಗುಗಳಲ್ಲಿ ಕಚ್ಚಾತೈಲ ಖರೀದಿಗೂ ಈ ಮೊತ್ತವನ್ನು ಬಳಸಲಾಗುತ್ತದೆ.