ಶ್ರೀಲಂಕಾದಲ್ಲಿ ಆರ್ಥಿಕ ಸಂಕಷ್ಟದಿಂದ ಭುಗಿಲೆದ್ದಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಓಡಿಹೋಗಿರುವ ಮಾಜಿ ಪ್ರಧಾನಿ ಮಹೀಂದ್ರ ರಾಜಪಕ್ಷ ಮತ್ತವರ ಕುಟುಂಬ ಶ್ರೀಲಂಕಾ ನೌಕಾ ನೆಲೆಯಲ್ಲಿ ಆಶ್ರಯ ಪಡೆದಿದ್ದಾರೆ.
ನಿನ್ನೆಯಷ್ಟೇ ಪ್ರಧಾನಿ ಸ್ಥಾನಕ್ಕೆ ಮಹೀಂದ್ರ ರಾಜಪಕ್ಷ ರಾಜೀನಾಮೆ ನೀಡಿದ್ದರು. ಆ ಬಳಿಕ ಹೆಲಿಕಾಪ್ಟರ್ನಲ್ಲಿ ಕುಟುಂಬ ಸಮೇತ ಪಲಾಯನ ಮಾಡಿರುವ ರಾಜಪಕ್ಷ ನೌಕಾನೆಲೆಯಲ್ಲಿ ಅಡಗಿಕೊಂಡಿದ್ದಾರೆ.
ನೌಕಾ ನೆಲೆಯಲ್ಲಿ ರಾಜಪಕ್ಷ ಅಡಗಿಕೊಂಡಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಅಲ್ಲಿಗೂ ಪ್ರತಿಭಟನಾಕಾರರು ನುಗ್ಗಿದ್ದು, ನೌಕಾನೆಲೆಯ ಹೊರಗೆ ಪ್ರತಿಭಟಿಸುತ್ತಿದ್ದಾರೆ. ಕೊಲಂಬೋದಿಂದ 200 ಕಿಲೋ ಮೀಟರ್ ದೂರದಲ್ಲಿ ಈ ನೌಕಾ ನೆಲೆಯಿದೆ.
ಹಿಂಸಾಚಾರ ಹಿನ್ನೆಲೆಯಲ್ಲಿ ದ್ವೀಪ ರಾಷ್ಟ್ರಾದ್ಯಂತ ಕಫ್ರ್ಯೂ ಹೇರಲಾಗಿದೆಯಾದರೂ ಹಿಂಸೆ ನಿಂತಿಲ್ಲ. ಆಡಳಿತ ಪಕ್ಷದ ಸಂಸದರ ಮನೆಗಳಿಗೆ ಬೆಂಕಿ ಹಚ್ಚಲಾಗುತ್ತಿದೆ ಎಂದೂ ತಿಳಿದುಬಂದಿದೆ.
ಕೊಲಂಬೋದಲ್ಲಿರುವ ಮಾಜಿ ಪ್ರಧಾನಿ ರಾಜಪಕ್ಷ ನಿವಾಸದ ಮೇಲೆ ನಿನ್ನೆ ಪ್ರತಿಭಟನಕಾರರು 10ಕ್ಕೂ ಹೆಚ್ಚು ಕಚ್ಚಾ ಬಾಂಬ್ಗಳನ್ನು ಎಸೆದಿದ್ದರು. ಈ ಹಿನ್ನೆಲೆಯಲ್ಲಿ ನಸುಕಿನ ಜಾವವೇ ವಿಶೇಷ ಕಾರ್ಯಾಚರಣೆ ಮೂಲಕ ರಾಜಪಕ್ಷ ಮತ್ತವರ ಕುಟುಂಬವನ್ನು ಸುರಕ್ಷಿತವಾಗಿಡುವ ಸಲುವಾಗಿ ನೌಕಾನೆಲೆಗೆ ಸ್ಥಳಾಂತರಿಸಲಾಗಿದೆ.
ಮಹೀಂದ್ರ ರಾಜಪಕ್ಷ ಸಹೋದರ ಗೊಟಬಯಾ ರಾಜಪಕ್ಷ ಶ್ರೀಲಂಕಾ ಅಧ್ಯಕ್ಷರಾಗಿದ್ದಾರೆ.