ಇಂದು ಸೋಮವಾರ ರಾಜ್ಯಾದ್ಯಂತ 2022 ನೇ ಸಾಲಿನ ಎಸ್ಎಸ್ಎಲ್ಸಿಯ ಮೊದಲ ದಿನದ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ರಾಯಚೂರು ಜಿಲ್ಲೆಯ ಮರಕಮದಿನ್ನಿಯ ಫ್ರೌಢ ಶಾಲೆಯಲ್ಲಿಯೂ ವಿದ್ಯಾರ್ಥಿಗಳು ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾರೆ.
ಬಿಸಿಲಿನ ಝಳದಿಂದ ಬಸವಳಿದಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿದ ನಂತರ ತಂಪು ಪಾನೀಯ ನೀಡುವ ಮೂಲಕ ಗ್ರಾಮದ ಅಂಗವಿಕಲ ಯುವಕ ಸೋಮಣ್ಣ ಅವರು ಮಾನವೀಯತೆ ಮೆರೆದಿದ್ದಾರೆ.
ಮಸ್ಕಿ ತಾಲೂಕಿನ ಮರಕಮದಿನ್ನಿ ಗ್ರಾಮದ ಫ್ರೌಡ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ನಡೆದಿದೆ. ಈ ಮೊದಲು ಇಲ್ಲಿನ ವಿದ್ಯಾರ್ಥಿಗಳು 10 ಕಿ.ಮೀ ದೂರವಿದ್ದ ಪೋತ್ನಾಳ ಗ್ರಾಮಕ್ಕೆ ಪರೀಕ್ಷೆ ಬರೆಯಲು ಹೋಗಬೇಕಾಗಿತ್ತು. ಇದೀಗ, ಸಾರ್ವಜನಿಕ ಶಿಕ್ಷಣ ಇಲಾಖೆ ಗ್ರಾಮದಲ್ಲಿಯೇ ಪರೀಕ್ಷಾ ಕೇಂದ್ರ ಮಾಡಿದ್ದರಿಂದ ವಿದ್ಯಾರ್ಥಿಗಳು ನಿರಾತಂಕದಿಂದ ಪರೀಕ್ಷೆಗೆ ಹಾಜರಾಗಿದ್ದಾರೆ.
ಗ್ರಾಮದ ಅಂಗವಿಕಲ ಯುವಕನ ಈ ಮಾನವೀಯ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂಧರ್ಭದಲ್ಲಿ ಪರೀಕ್ಷಾ ಕೇಂದ್ರದ ಪರಿವೀಕ್ಷಕರಾದ ಶ್ರೀಮತಿ ಕಮಲಾಕ್ಷಿ, ಕಸ್ತೂಡಿಯನ್ ಅಮರೇಶ್ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.