ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ರಾಜ್ಯ ಪದಾಧಿಕಾರಿಗಳ ತಂಡ ಅಧಿಕಾರವಹಿಸಿಕೊಂಡ ಬಳಿಕ ಮೊದಲ ಬಾರಿಗೆ ರಾಜ್ಯ ಬಿಜೆಪಿಯ ಕಾರ್ಯ ಕಾರಿಣಿ ಸಭೆ ಇಂದು ನಡೆಯಲಿದೆ.
ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಶನಿವಾರ ಬೆಳಗ್ಗೆ 10.30ರಿಂದ ಬಿಜೆಪಿ ಕಾರ್ಯಕಾರಿಣಿ ಸಭೆ ಆರಂಭ ಆಗುತ್ತದೆ. ರಾಜ್ಯದ ಬಿಜೆಪಿ ಪದಾಧಿಕಾರಿಗಳ ನೇಮಕದ ಬಳಿಕ ಮೊದಲ ಸಭೆ ಇದಾಗಿದೆ. 900ಕ್ಕೂ ಹೆಚ್ಚು ನಮ್ಮ ಪಕ್ಷದ ಮುಖಂಡರು ಬರಲಿದ್ದಾರೆ. ಪಕ್ಷದ ಹಿರಿಯ ನಾಯಕರು ಮಾಜಿ ಸಿಎಂಗಳು ವೇದಿಕೆಯಲ್ಲಿ ಇರಲಿದ್ದಾರೆ.
ಶುಕ್ರವಾರ ಕಾರ್ಯಕಾರಿಣಿ ನಡೆಯುವ ಸ್ಥಳದ ಸಿದ್ಧತೆಗಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪಕ್ಷದ ಚಟುವಟಿಕೆ ಜೊತೆಗೆ ನಮ್ಮ ಮುಂದಿನ ಕಾರ್ಯ ಯೋಜನೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ರಾಜ್ಯದಲ್ಲಿರುವ ಬಡವರು, ರೈತರು ಮತ್ತು ದಲಿತ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟಗಳನ್ನು ಕೈಗೆತ್ತಿಕೊಳ್ಳಬೇಕು. ಬಡವರ ವಿರೋಧಿ ಸರಕಾರದ ಬಗ್ಗೆ ಜನರಿಗೆ ಸತ್ಯಾಂಶಗಳನ್ನು ತಲುಪಿಸಬೇಕು ಎಂದು ಉದ್ದೇಶಿಸಿದ್ದೇವೆ ಎಂದರು.