ಮಂಗಳೂರು ನಗರದಲ್ಲಿ ಪ್ರಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಕಿಸ್ಸಿಂಗ್ ಸ್ಪರ್ಧೆ ಆಯೋಜನೆ ಮಾಡಿದ್ದರೆನ್ನಲಾದ ಹಾಗೂ ಆ ವಿಡಿಯೋದಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಕಿಸ್ಸಿಂಗ್ ಮಾಡುವ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದು ನಗರದ ಕಾಲೇಜುಗಳಿಗೆ ಹಾಗೂ ಪೋಷಕರಿಗೆ ಮುಜುಗರ ತಂದಿತ್ತು.
ವೈರಲ್ ಆದ ವಿಡಿಯೋದಲ್ಲಿ ಕಾಲೇಜಿನ ಸಮವಸ್ತ್ರ ಹಾಗೂ ಐಟಿ ಕಾರ್ಡ್ ಧರಿಸಿದ್ದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಬ್ಬರು ಕಿಸ್ಸಿಂಗ್ ಮಾಡುತ್ತಿದ್ದರು. ಸಹ ಪಾಠಿ ವಿದ್ಯಾರ್ಥಿಗಳು ಇದಕ್ಕೆ ಬೆಂಬಲಿಸಿ ಹರ್ಷೋದ್ಗಾರ ಮಾಡುತ್ತಿದ್ದರು. ಈ ವಿದ್ಯಾರ್ಥಿಗಳು ಕಿಸ್ಸಿಂಗ್ ಸ್ಪರ್ಧೆ ಆಯೋಜನೆ ಮಾಡಿದ್ದರು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಈ ವಿಡಿಯೋ ಮಾಡಿದ್ದ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರು ನಗರದ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಅವರು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಈ ಘಟನೆ 6 ತಿಂಗಳ ಹಿಂದೆ ಒಂದು ಖಾಸಗಿ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಈ ಗುಂಪಿನಲ್ಲಿದ್ದ ಒಬ್ಬ ವಿದ್ಯಾರ್ಥಿ ಒಂದು ವಾರದ ಹಿಂದೆ ಈ ವಿಡಿಯೋವನ್ನು ತನ್ನ ವ್ಯಾಟ್ಸಾಪ್ನ ಸ್ಟೇಟಸ್ಗೆ ಹಾಕಿಕೊಂಡಿದ್ದ. ಅನಂತರ ಈ ವಿಡಿಯೋ ವೈರಲ್ ಆಗಿದೆ ಎಂದಿದ್ದಾರೆ.
ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಕಾಲೇಝಿನಿಂದ ಅಮಾನತು ಮಾಡಿದೆ. ಕಾಲೇಜಿನ ಆಡಳಿತ ಮಂಡಳಿ ಹಾಗೂ ಪೋಷಕರು ಇದರ ಬಗ್ಗೆ ಪ್ರಕರಣ ದಾಖಲಿಸಿಲ್ಲ. ವಿದ್ಯಾರ್ಥಿಗಳು ಈ ಕಿಸ್ಸಿಂಗ್ ಸ್ಪರ್ಧೆ ಆಯೋಜನೆ ಮಾಡಿದ ವೇಳೆ ಮಾದಕ ವಸ್ತು ಸೇವನೆ ಮಾಡಿದ್ದರೆ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಕಮೀಷನರ್ ಹೇಳಿದ್ದಾರೆ.