ಕೇಂದ್ರ ಸರ್ಕಾರದ ಥಿಂಕ್ ಟ್ಯಾಂಕ್ ನೀತಿ ಆಯೋಗದ ಉಪಾಧ್ಯಕ್ಷರಾಗಿ ಖ್ಯಾತ ಅರ್ಥಶಾಸ್ತ್ರಜ್ಞ ‘ಸುಮನ್ ಬೆರಿ’ ಭಾನುವಾರ ಅಧಿಕಾರ ವಹಿಸಿಕೊಂಡರು.
ಬೆರಿ ಈ ಹಿಂದೆ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ನ ಡೈರೆಕ್ಟರ್ ಜನರಲ್ (ಮುಖ್ಯ ಕಾರ್ಯನಿರ್ವಾಹಕ) ಮತ್ತು ರಾಯಲ್ ಡಚ್ ಶೆಲ್ನ ಜಾಗತಿಕ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ, ಅಂಕಿಅಂಶ ಆಯೋಗ ಮತ್ತು ವಿತ್ತೀಯ ನೀತಿಯ ಭಾರತೀಯ ರಿಸರ್ವ್ ಬ್ಯಾಂಕ್ನ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾಗಿದ್ದರು.
“ಮೇ 1, 2022 ರಿಂದ ಜಾರಿಗೆ ಬರುವಂತೆ ನೀತಿ ಆಯೋಗದ ಉಪಾಧ್ಯಕ್ಷರಾಗಿ ಸುಮನ್ ಬೆರಿ ಅವರನ್ನು ನೀತಿ ಆಯೋಗ ಸ್ವಾಗತಿಸುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ರಾಜೀವ್ ಕುಮಾರ್ ಅವರ ಜಾಗಕ್ಕೆ ಅನುಭವಿ ನೀತಿ ಅರ್ಥಶಾಸ್ತ್ರಜ್ಞ ಮತ್ತು ಸಂಶೋಧನಾ ನಿರ್ವಾಹಕರಾದ ಬೆರಿ ಅವರನ್ನು ನೇಮಿಸಲಾಗಿದೆ. ಅರವಿಂದ್ ಅರವಿಂದ್ ಪನಗಾರಿಯಾ ನಿರ್ಗಮನದ ನಂತರ 2017 ಆಗಸ್ಟ್ ನಲ್ಲಿ ನೀತಿ ಆಯೋಗದ ಉಪಾಧ್ಯಕ್ಷರಾಗಿ ರಾಜೀವ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು.
ಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಜವಾಬ್ದಾರಿಯನ್ನು ವಹಿಸಿಕೊಟ್ಟಿರುವುದಕ್ಕೆ ಅತೀವವಾದ ಗೌರವವಿದೆ ಎಂದು ಬೆರಿ ಹೇಳಿದ್ದಾರೆ.