ರಾಜಸ್ಥಾನ: ನೀಟ್, ಜೆಇಇ ಸೇರಿದಂತೆ ಉನ್ನತ ಶಿಕ್ಷಣ ತರಬೇತಿಗೆ ಖ್ಯಾತಿ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆಯಿಂದ ಕುಖ್ಯಾತಿ ಹೊಂದಿರುವ ರಾಜಸ್ಥಾನದ ಕೋಟಾದಲ್ಲಿ, ಮತ್ತೋರ್ವ ವಿದ್ಯಾರ್ಥಿನಿ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದು ಈ ವಾರದಲ್ಲಿ ನಡೆದ ವಿದ್ಯಾರ್ಥಿಗಳ ಆತ್ಮಹತ್ಯೆಯ 2ನೇ ಪ್ರಕರಣವಾಗಿದೆ.
ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೂವರು ಹೆಣ್ಣು ಮಕ್ಕಳ ಪೈಕಿ ಹಿರಿಯಳಾದ ನಿಹಾರಿಕಾ (18) ಆತ್ಮಹತ್ಯೆ ಮಾಡಿಕೊಂಡವಳು. ಶೀಘ್ರವೇ ನಡೆಯಲಿರುವ ಜೆಇಇ ಪರೀಕ್ಷೆ ಎದುರಿಸುವ ಧೈರ್ಯ ಸಾಲದೇ ಆತಂಕಕ್ಕೆ ಒಳಗಾಗಿ ಸೋಮವಾರ ಪತ್ರ ಬರೆದಿಟ್ಟು ಸಾವಿಗೆ ಶರಣಾಗಿದ್ದಾಳೆ. ಆತ್ಮಹತ್ಯಾ ಪತ್ರದಲ್ಲಿ, ‘ಜೆಇಇ ಪಾಸು ಮಾಡಲಾರೆ, ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ… ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನೊಬ್ಬ ಲೂಸರ್, ನಾನೊಬ್ಬ ಕೆಟ್ಟ ಹುಡುಗಿ, ಇದು ಕೊನೆಯ ಅವಕಾಶ’ ಎಂಬ ಮನ ಕರಗುವ ಸಾಲುಗಳಿವೆ.
ಇಲ್ಲಿನ ಶಿವವಿಹಾರ್ ಕಾಲೋನಿಯಲ್ಲಿ ತನ್ನ ಕುಟುಂಬದ ಜೊತೆ ವಾಸವಿದ್ದ ನಿಹಾರಿಕಾ ಸೋಮವಾರ ಬೆಳಗ್ಗೆ 10 ಗಂಟೆಯಾದರೂ ತನ್ನ ಕೋಣೆಯ ಬಾಗಿಲು ತೆರೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಾಗಿಲು ಒಡೆದು ನೋಡಿದಾಗ ಆಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಕಳೆದ ವರ್ಷ 22 ಆತ್ಮಹತ್ಯಾ ಕೇಸು
ಕಳೆದ ವರ್ಷ ಕೂಡಾ ಪರೀಕ್ಷೆ ಪಾಸು ಮಾಡಲಾಗದ ಒತ್ತಡಕ್ಕೆ ಸಿಲುಕಿ ಕೋಟಾದಲ್ಲಿ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೋಷಕರು ಮಕ್ಕಳನ್ನು ಪರೀಕ್ಷೆ ಪಾಸು ಮಾಡುವ ಒತ್ತಡಕ್ಕೆ ಸಿಲುಕುವಂತೆ ಮಾಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಸಲಹೆ ನೀಡಿದ್ದರು. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ.