ಕಿತ್ತೂರು ಕರ್ನಾಟಕದ ರೋಣ ವಿಧಾನಸಭೆ ಕ್ಷೇತ್ರದಲ್ಲಿ ಯಾವ ಪಕ್ಷ ಗೆಲ್ಲುತ್ತದೆಯೋ ಆ ಪಕ್ಷವೇ ಸರ್ಕಾರೆ ರಚನೆ ಮಾಡುತ್ತದೆ ಎಂಬ ಸೆಂಟಿಮೆಂಟ್ ಇದೆ.
1957ರಿಂದಲೇ ರೋಣ ಮತಕ್ಷೇತ್ರದ ಜನತೆ ಅಧಿಕಾರಕ್ಕೆ ಬರಲಿರುವ ಪಕ್ಷಕ್ಕೆ ವೋಟ್ ಹಾಕುತ್ತಾ ಬಂದಿದ್ದಾರೆ. ಒಂದೇ ಪಕ್ಷವನ್ನು ಸತತ ಎರಡು ಬಾರಿ ಗೆಲ್ಲಿಸಿದ ಉದಾಹರಣೆ ಇಲ್ಲಿಲ್ಲ..
ಒಟ್ಟು 224 ಕ್ಷೇತ್ರಗಳಲ್ಲಿ ಕರ್ನಾಟಕ ಸರ್ಕಾರವನ್ನು ನಿರ್ಣಯಿಸುವ ಕ್ಷೇತ್ರಗಳು ರೋಣ ಜೊತೆಗೆ 84 ಇವೆ. ಈ ಕ್ಷೇತ್ರಗಳಲ್ಲಿ ಆಡಳಿತವಿರೋಧಿ ಅಲೆ ಹೆಚ್ಚಾಗಿ ಕೆಲಸ ಮಾಡುತ್ತದೆ… ಅದಕ್ಕೆ, ಯಾವ ಪಕ್ಷ ಕೂಡ ಸತತ ಎರಡನೇ ಬಾರಿ ಗೆಲ್ಲೋದು ಕಷ್ಟ ಸಾಧ್ಯ ಎಂದು ಅಭಿಪ್ರಾಯ ಪಡುತ್ತಾರೆ ಅಜೀಂ ಪ್ರೇಮ್ ಜಿ ವಿವಿಯ ಪ್ರೊಫೆಸರ್, ರಾಜಕೀಯ ವಿಶ್ಲೇಷಕ ಎ ನಾರಾಯಣ.
2018ರ ಚುನಾವಣೆ; ಸ್ವಿಂಗ್ ಸ್ಥಾನಗಳಲ್ಲಿ ಬಿಜೆಪಿ ಸ್ವೀಪ್
# ಲಿಂಗಾಯತ ಬಾಹುಳ್ಯದ ಮುಂಬೈ ಕರ್ನಾಟಕ ಪ್ರಾಂತ್ಯದಲ್ಲಿ 19 ಸ್ವಿಂಗ್ ಸೀಟ್ ಇವೆ. 2018ರ ಚುನಾವಣೆಯಲ್ಲಿ ಈ ಎಲ್ಲಾ ಸ್ಥಾನಗಳನ್ನು ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು.
# ಮಧ್ಯ ಕರ್ನಾಟಕದಲ್ಲಿ 20 ಸ್ವಿಂಗ್ ಸೀಟ್ ಇವೆ.. ಈ ಪ್ರಾಂತ್ಯದಲ್ಲಿ ಲಿಂಗಾಯತರ ಜೊತೆ ಒಕ್ಕಲಿಗರ ಪ್ರಾಬಲ್ಯವೂ ಇದೆ. ಕಳೆದ ಚುನಾವಣೆಯಲ್ಲಿ 16 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು.
# ಬಿಜೆಪಿಯ ಭದ್ರಕೋಟೆ ಎಂದು ಭಾವಿಸಲಾಗುವ ಕರಾವಳಿ ಕರ್ನಾಟಕದಲ್ಲಿ ಅತ್ಯಧಿಕ ಸ್ವಿಂಗ್ ಸೀಟ್ ಗಳಿವೆ. ಈ ಪ್ರಾಂತ್ಯದಲ್ಲಿರುವ 19 ಸ್ಥಾನಗಳಲ್ಲಿ 10 ಸೀಟ್ ಗಳು ಸ್ವಿಂಗ್ ಸೀಟ್ ಗಳಾಗಿವೆ.
# 2018ರ ಚುನಾವಣೆಯಲ್ಲಿ ಎಲ್ಲಾ ಸ್ವಿಂಗ್ ಸೀಟ್ ಗಳಲ್ಲಿ ಬಿಜೆಪಿ ಗೆದ್ದಿತ್ತು. ಶೇಕಡಾ 20 ಪರ್ಸೆಂಟ್ ಮುಸ್ಲಿಮರು ಇರುವ ಈ ಪ್ರದೇಶದಲ್ಲಿ ವಿಭಜನೆ ರಾಜಕೀಯವೇ ಪ್ರಮುಖ ಪಾತ್ರ ವಹಿಸುತ್ತದೆ.
# ಹೈದ್ರಾಬಾದ್ ಕರ್ನಾಟಕದಲ್ಲಿ 12 ಸ್ವಿಂಗ್ ಸೀಟ್ ಗಳಿದ್ದು, ಇಲ್ಲಿಯೂ ಬಿಜೆಪಿಯೇ ಮೇಲುಗೈ ಸಾಧಿಸಿತ್ತು.
# ದಕ್ಷಿಣ ಕರ್ನಾಟಕದಲ್ಲಿ ಒಟ್ಟು 46 ಸ್ಥಾನಗಳ ಪೈಕಿ 14 ಸ್ವಿಂಗ್ ಸೀಟ್ ಗಳಿವೆ. ಒಕ್ಕಲಿಗರ ಪ್ರಾಬಲ್ಯದ ಈ ಪ್ರಾಂತ್ಯದಲ್ಲಿ ಅರ್ಧಕ್ಕೂ ಹೆಚ್ಚು ಸ್ವಿಂಗ್ ಸೀಟ್ ಗಳನ್ನು ಜೆಡಿಎಸ್ ಗೆದ್ದುಕೊಂಡಿತ್ತು. ಏಳು ಸ್ಥಾನಗಳನ್ನು ಜೆಡಿಎಸ್, ಬಿಜೆಪಿ 4, ಕಾಂಗ್ರೆಸ್ ಮೂರು ಸ್ವಿಂಗ್ ಸೀಟ್ ಗಳನ್ನು ದಕ್ಕಿಸಿಕೊಂಡಿದ್ದವು.
# ಬೆಂಗಳೂರು ನಗರದಲ್ಲಿರುವ ಎರಡು ಸ್ವಿಂಗ್ ಸೀಟ್ ಬಿಜೆಪಿ ತೆಕ್ಕೆಯಲ್ಲಿವೆ.
ಈ ಬಾರಿ ಸ್ವಿಂಗ್ ಸೀಟ್ ಮೇಲೆಯೇ ಕಣ್ಣು.
ಲಿಂಗಾಯತರ ಹಿಡಿತದಲ್ಲಿರುವ ಕ್ಷೇತ್ರಗಳು, ಮತವಿಭಜನೆ ರಾಜಕೀಯ ಕೇಂದ್ರವಾದ ಕರಾವಳಿ ಕರ್ನಾಟಕದಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಸ್ವಿಂಗ್ ಸೀಟ್ ಗಳನ್ನು ಬಿಜೆಪಿ ಹೆಚ್ಚು ಕಡಿಮೆ ಸ್ವೀಪ್ ಮಾಡಿತ್ತು. ಒಟ್ಟು 84 ಸ್ಥಾನಗಳ ಪೈಕಿ 65ರಲ್ಲಿ ಬಿಜೆಪಿಯೇ ಗೆದ್ದಿತ್ತು.
ದಶಕಗಳ ಚುನಾವಣಾ ಲೆಕ್ಕಗಳನ್ನು ಅವಲೋಕಿಸಿದಲ್ಲಿ ಈ ಸ್ವಿಂಗ್ ಸೀಟ್ ಗಳಲ್ಲಿ ಈ ಬಾರಿ ಬಿಜೆಪಿ ಗೆಲ್ಲುವ ಸಾಧ್ಯತೆ ಇಲ್ಲ. ಇದನ್ನು ಮನಗಂಡಿರುವ ಬಿಜೆಪಿ ತುಂಬಾ ದಿನಗಳಿಂದಲೇ ಈ ಕ್ಷೇತ್ರಗಳ ಮೇಲೆ ದೃಷ್ಟಿ ನೆಟ್ಟಿದೆ. ಸ್ವಿಂಗ್ ಸೀಟ್ ಪೈಕಿ 30ರಲ್ಲಿ ಲಿಂಗಾಯತರೇ ನಿರ್ಣಾಯಕ ಶಕ್ತಿಯಾಗಿದ್ದಾರೆ. ಆಡಳಿತವಿರೋಧಿ ಅಲೆಯನ್ನು ಹೊಸ ಅಭ್ಯರ್ಥಿಗಳು ಮತ್ತು ಮೋದಿ ಇಮೇಜ್ ಮೂಲಕ ಹಿಮ್ಮೆಟ್ಟಿಸಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆ.
ಆದರೆ, ಈ ಬಾರಿ ಮೋದಿ ಇಮೇಜ್ ಕೆಲಸ ಮಾಡುವುದು ಅನುಮಾನ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ನರೇಂದ್ರ ಮೋದಿ ಬಗ್ಗೆ ಜನರಲ್ಲಿ ಆಕರ್ಷಣೆ ಉಳಿದುಕೊಂಡಿದ್ದರೂ, ಅವರನ್ನು ಸ್ಥಳೀಯರೆಂದು ಜನ ಭಾವಿಸಲ್ಲ. ಲೋಕಸಭೆ ಚುನಾವಣೆಯಲ್ಲಿ ಮೋದಿ ಚಾರ್ಮ್ ವರ್ಕೌಟ್ ಆಗಬಹುದು.. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಮೋದಿ ಇಮೇಜ್ ಕೆಲಸ ಮಾಡಲ್ಲ ಎನ್ನುತ್ತಿದ್ದಾರೆ.
ಮತ್ತೊಂದ್ಕಡೆ ಸ್ವಿಂಗ್ ಸೀಟ್ ಮೇಲೆ ಕಾಂಗ್ರೆಸ್ ಪಕ್ಷವೂ ವಿಶೇಷ ಗಮನ ಇರಿಸಿದೆ. ಸ್ಥಳೀಯವಾಗಿ ಪ್ರಬಲವಾಗಿರುವ ಅಭ್ಯರ್ಥಿಗಳನ್ನೇ ಕಾಂಗ್ರೆಸ್ ಕಣಕ್ಕೆ ಇಳಿಸಿದೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಆಗಮನದಿಂದ ಲಿಂಗಾಯತ ವೋಟ್ ಬ್ಯಾಂಕ್ ನ ಸ್ವಲ್ಪವಾದರೂ ಸೆಳೆಯಬಹುದು ಎಂಬ ಲೆಕ್ಕಾಚಾರವನ್ನು ಕಾಂಗ್ರೆಸ್ ಹೊಂದಿದೆ.
ಒಟ್ಟಿನಲ್ಲಿ ಎರಡು ಪಕ್ಷಗಳಿಗೆ 84 ಸ್ವಿಂಗ್ ಸೀಟ್ ಗೆಲ್ಲುವ ತವಕವಿದೆ.
224 ಸ್ಥಾನಗಳ ಪೈಕಿ 60 ಸೇಫ್ ಸೀಟ್. ಇಲ್ಲಿ ಕಳೆದ ಮೂರು ಚುನಾವಣೆಗಳಿಂದ ಒಂದೇ ಪಕ್ಷ ಗೆಲ್ಲುತ್ತಾ ಬಂದಿದೆ. ಈ ಸೇಫ್ ಸೀಟ್ ಪೈಕಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 10 ಸ್ಥಾನಗಳನ್ನು ಹೊಂದಿದೆ. ಈ ಸೀಟ್ ಕಾಪಾಡಿಕೊಳ್ಳಲು ಮೂರು ಪಕ್ಷಗಳು ಸರ್ವ ಪ್ರಯತ್ನ ಮಾಡುತ್ತಾ ಬಂದಿವೆ.