ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹೇರಿಕೆ ನಿರ್ಧಾರಗಳ ವಿರುದ್ಧ ಸೆಡೆದು ನಿಂತಿರುವ ತಮಿಳುನಾಡು `ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ’ ವಿರುದ್ಧ ನಿರ್ಣಯ ಅಂಗೀಕರಿಸಿದೆ.
ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮಂಡಿಸಿದ ನಿರ್ಣಯಕ್ಕೆ ಬಿಜೆಪಿ ಹೊರುತಪಡಿಸಿ ರಾಜ್ಯದ ಉಳಿದೆಲ್ಲ ರಾಜಕೀಯ ಪಕ್ಷಗಳು ಬೆಂಬಲಿಸುವ ಮೂಲಕ ಸರ್ವಾನುಮತದಿಂದ ನಿರ್ಣಯ ಅಂಗೀಕಾರಗೊAಡಿದೆ.
ಪದವಿ ತರಗತಿಗಳಿಗೆ ಪ್ರವೇಶಾತಿಗೆ ಆಯಾಯ ರಾಜ್ಯಗಳು ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆ ಪಾಸಾಗಿದ್ದರೆ ಸಾಲದು, ಬದಲಿಗೆ ಕೇಂದ್ರ ಸರ್ಕಾರದ ಯುಜಿಸಿ ಸಂಸ್ಥೆ ನಡೆಸುವ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಪಾಸಾಗುವುದು ಕಡ್ಡಾಯ ಎಂಬ ನಿಯಮವನ್ನು ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತಂದಿದೆ.
`ರಾಜ್ಯಗಳ ಹಕ್ಕುಗಳ ಪ್ರತಿಪಾದನೆ’ ಜೊತೆಗೆ `ನೀಟ್ ಪರೀಕ್ಷೆಯಂತೆ ಸಿಯುಇಟಿ ಕೂಡಾ ದೇಶಾದ್ಯಂತ ಇರುವ ಶೈಕ್ಷಣಿಕ ವೈವಿಧ್ಯತೆಯನ್ನು ಕಡೆಗಣಿಸುತ್ತದೆ. ಪ್ರವೇಶ ಪರೀಕ್ಷೆಗಳ ಕಾರಣದಿಂದ ವಿದ್ಯಾರ್ಥಿಗಳ ಮೇಲೆ ಅನಗತ್ಯ ಹೆಚ್ಚುವರಿ ಒತ್ತಡ ಬೀಳುವುದಲ್ಲದೇ ನಾಯಿಕೊಡೆಗಳಂತೆ ಕೋಚಿಂಗ್ ಸೆಂಟರ್ಗಳು ಹುಟ್ಟಿಕೊಳ್ಳಲು ಕಾರಣ ಆಗುತ್ತದೆ’ ಎಂದು ನಿರ್ಣಯದಲ್ಲಿ ಹೇಳಲಾಗಿದೆ.