ಇರುವೆಗಳೇ ಅಲ್ವಾ ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ.. ಕೈಯಲ್ಲಿ ಉಜ್ಜಿದರೆ ಸತ್ತು ಹೋಗುತ್ತವೆ ಎಂಬ ಆತ್ಮವಿಶ್ವಾಸ ಬೇಡ. ಏಕೆಂದರೆ ಇವು ಕಪ್ಪಿರುವೆ ಅಲ್ಲ, ಕೆಂಪಿರುವೆ ಅಲ್ಲ.. ಇವು ಹುಚ್ಚಿರುವೆ.. ಲಕ್ಷ ಲಕ್ಷ ಇರುವೆಗಳು ಒಮ್ಮೆಲೆ ದಂಡೆತ್ತಿ ಬಂದಲ್ಲಿ ಎಂತಹ ವೀರರಾದರೂ ಓಡಿ ಹೋಗಲೇಬೇಕು.

ಎಲ್ಲೊ ಕ್ರೇಜಿ ಆಂಟ್ಸ್ ಎಂಬ ಜಾತಿಯ ಇರುವೆಗಳ ಹೊಡೆತಕ್ಕೆ ತಮಿಳುನಾಡಿನ (Tamilnadu)ದಿಂಡಿಕ್ಕಲ್ ಜಿಲ್ಲೆಯ ಕರಂತಮಲೈ ಅರಣ್ಯ ವ್ಯಾಪ್ತಿಯಲ್ಲಿ (Karantamalai Forest)ಏಳು ಗ್ರಾಮಗಳ ಜನ ಊರನ್ನೇ ತೊರೆದಿದ್ದಾರೆ.

ಈ ಇರುವೆಗಳು ಕಣ್ಣಿಗೆ ಕಂಡಿದ್ದನ್ನೆಲ್ಲ ಸ್ವಾಹ ಮಾಡುತ್ತಿವೆ. ಸಣ್ಣ ಸಣ್ಣ ಕೀಟ, ಪ್ರಾಣಿಗಳನ್ನು ಸಾಯಿಸಿ ತಿನ್ನುತ್ತಿವೆ. ಇಲಿಗಳು, ಮೊಲಗಳು, ಹಾವುಗಳು, ಹಲ್ಲಿಗಳು.. ಹೀಗೆ ಈ ಪರಿಸರದಲ್ಲಿ ಏನೊಂದು ಈಗ ಕಂಡು ಬರುತ್ತಿಲ್ಲ. ರೈತರು ಬೆಳೆದಿದನ್ನೆಲ್ಲ ಖಾಲಿ ಮಾಡುತ್ತಿವೆ. ಗಾಯಗೊಂಡ ಜಾನುವಾರುಗಳ ಪ್ರಾಣವನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಹಸು, ಕುರಿ, ಮೇಕೆಗಳು ಕಣ್ಣ ದೃಷ್ಟಿ ಕಳೆದುಕೊಳ್ಳುತ್ತಿವೆ.
ಈ ಹಿಂದೆಂದೂ ಇಂತಹ ಸನ್ನಿವೇಶ ನೋಡಿಯೇ ಇರಲಿಲ್ಲ ಎನ್ನುತ್ತಾರೆ ಬಾಧಿತ ವೇಲಾಯುಧಮ್ ಪಟ್ಟಿ ಗ್ರಾಮಸ್ಥರು ಹೇಳುತ್ತಾರೆ. ಅರಣ್ಯದಿಂದ ನಾಡಿಗೆ ದಂಡಯಾತ್ರೆ ನಡೆಸಿರುವ ಹಳದಿ ಹುಚ್ಚು ಇರುವೆಗಳು ಶೀತ ವಾತವರಣದಲ್ಲಿ ಇನ್ನಷ್ಟು ರೊಚ್ಚಿಗೇಳುತ್ತಿವೆ. ಜನ ಭಯಭೀತರಾಗಿದ್ದಾರೆ. ಮನೆಯಲ್ಲಿದ್ದರು, ಮನೆಯಿಂದ ಹೊರಗೆ ಬಂದರೂ ನಿಂತಲ್ಲಿ ಒಂದು ಕ್ಷಣವೂ ನಿಲ್ಲಲಾಗದ ಪರಿಸ್ಥಿತಿ ಇದೆ. ಹೀಗಾಗಿ ಜನ ಊರನ್ನೇ ಖಾಲಿ ಮಾಡಿ ಹೋಗುತ್ತಿದ್ದಾರೆ.

ಕಚ್ಚಲ್ಲ, ಕುಟುಕಲ್ಲ.. ಆದರೆ
ಅಂದ ಹಾಗೆ ಇವು ಕಚ್ಚಲ್ಲ, ಕುಟುಕಲ್ಲ.. ಆದರೆ, ಭಯಂಕರ ಫಾರ್ಮಿಕ್ ಆಸಿಡ್ (Formic Acid) ಅನ್ನು ಚಿಮ್ಮಿಸುತ್ತವೆ. ಇದು ಬಿದ್ದ ಜಾಗದಲ್ಲಿ ಕೆರೆತ, ಚರ್ಮದ ಅಲರ್ಜಿ ಉಂಟಾಗುತ್ತವೆ. ಪ್ರಾಣಿಗಳ ಕಣ್ಣಿಗೆ ಬಿದ್ದರೆ ಕಣ್ಣೇ ಹೊರಟು ಹೋಗುತ್ತದೆ. ಇರುವೆ ನಿಯಂತ್ರಣಕ್ಕೆ ಬಳಸುವ ಪೌಡರ್ ಬಳಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ.

ಸಾಕಷ್ಟು ದೂರುಗಳ ಹಿನ್ನೆಲೆಯಲ್ಲಿ ಅರಣ್ಯಧಿಕಾರಿಗಳು ಪರಿಶೀಲನೆ ನಡೆಸಿದಾಗ ಆತಂಕದ ವಿಚಾರಗಳು ಬಯಲಾಗಿವೆ. IUCS ಪ್ರಕಾರ ಎಲ್ಲೊ ಕ್ರೇಜಿ ಆಂಟ್ ಗಳು ಜಗತ್ತಿನ ಅತ್ಯಂತ ಅಪಾಯಕಾರಿ ಜೀವಿಗಳ ಟಾಪ್ 100 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ಹಿಂದೆ ಕೇರಳದಲ್ಲೂ ಹಳದಿ ಹುಚ್ಚು ಇರುವೆಗಳ ಕಾಟ ಕಂಡು ಬಂದಿತ್ತು. ಆದರೆ, ದಾಳಿ ಈ ಮಟ್ಟದಲ್ಲಿ ಇರಲಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲೆಲ್ಲಿ ಕಂಡು ಬರುತ್ತವೆ ಹಳದಿ ಹುಚ್ಚಿರುವೆ?
ಏಷ್ಯ, ಆಸ್ಟ್ರೇಲಿಯಾ, ಪಶ್ಚಿಮ ಆಫ್ರಿಕಾದ ಅರಣ್ಯಗಳಲ್ಲಿ ಹೆಚ್ಚಾಗಿ ಇವು ಕಂಡುಬರುತ್ತವೆ. ಹಳದಿ ಇರುವ ಕಡೆ ಹುಳ, ನೊಣ, ಗಿಣಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆ ಆಗಿವೆ.
ಕೇವಲ 5.5ಮಿಲಿ ಮೀಟರ್ ಉದ್ದದ ಹಳದಿ ಹುಚ್ಚು ಇರುವೆಗಳ ಕಾಲು ಉದ್ದ ಇರುತ್ತವೆ. ತಲೆ ಮೇಲೆ ಆಂಟೀನಾ ಮಾದರಿಯ ಎರಡು ಕೊಡು ಇರುತ್ತವೆ. ಲಘು ಹಳದಿ, ಗೋಧಿ ಮೈಬಣ್ಣ ಹೊಂದಿರುತ್ತವೆ. 80ದಿನಗಳವರೆಗೆ ಇವು ಜೀವಿಸುತ್ತವೆ.
ನಿಯಂತ್ರಣ ಹೇಗೆ?
ಆಸ್ಟ್ರೇಲಿಯಾದ ಕ್ರಿಸ್ಮಸ್ ದ್ವೀಪದ ಮೇಲೆ ದಾಳಿ ನಡೆಸಿದ್ದ ಈ ಹಳದಿ ಹುಚ್ಚು ಇರುವೆಗಳು ಲಕ್ಷ ಲಕ್ಷ ಹುಳು ಹುಪ್ಪಟೆಗಳನ್ನು ತಿಂದು ತೇಗಿದ್ವು. ಇದು ಪರಿಸರದ ಸಮತೋಲನದ ಮೇಲೆ ಪರಿಣಾಮ ಬೀರಿತ್ತು. ಹೀಗಾಗಿ ಹಳದಿ ಹುಚ್ಚು ಇರುವೆಗಳ ದಂಡಿನ ಸಂಹಾರಕ್ಕೆ ಹೆಲಿಕಾಪ್ಟರ್ ಮೂಲಕ ಔಷಧಿ ಪಿಚಕಾರಿ ಮಾಡಲಾಗಿತ್ತು.