ADVERTISEMENT
ಅಚ್ಚರಿಯ ಬೆಳವಣಿಗೆಯಲ್ಲಿ ಬಾಂಗ್ಲಾ ದೇಶ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಈ ಕ್ಷಣದಿಂದಲೇ ನಿವೃತ್ತಿ ಘೋಷಿಸಿದ್ದಾರೆ.
ಭಾರತದಲ್ಲಿ ನಡೆಯಲಿರುವ ಏಷ್ಯಾ ಕಪ್ಗೂ ಮೊದಲೇ ಅಚ್ಚರಿಯ ರೀತಿಯಲ್ಲಿ ಇಕ್ಬಾಲ್ ನಿವೃತ್ತಿ ಘೋಷಿಸಿದ್ದಾರೆ. ನಿನ್ನೆಯಷ್ಟೇ ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾ ದೇಶ ಮೊದಲ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿತ್ತು.
ಕಿಕ್ಕಿರಿದು ನೆರೆದಿದ್ದ ಮಾಧ್ಯಮದವರ ಸಮ್ಮುಖದಲ್ಲಿ ಕಣ್ಣೀರು ಹಾಕುತ್ತಲೇ ಇಕ್ಬಾಲ್ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. ಆಗಸ್ಟ್ 31ರಿಂದ ಏಷ್ಯಾ ಕಪ್ ಆರಂಭವಾಗಲಿದ್ದು, ಬಾಂಗ್ಲಾ ದೇಶ ಏಕದಿನ ತಂಡಕ್ಕೆ ಹೊಸ ನಾಯಕನನ್ನು ಘೋಷಿಸಬೇಕಿದೆ.
16 ವರ್ಷದ ಕ್ರಿಕೆಟ್ ಜೀವನಕ್ಕೆ 34 ವರ್ಷದ ತಮೀಮ್ ವಿದಾಯ ಹೇಳಿದ್ದಾರೆ. ಕಳೆದ ವರ್ಷ ಟಿ-ಟ್ವೆಂಟಿಯಿಂದಲೂ ನಿವೃತ್ತಿ ಘೋಷಿಸಿದ್ದಾರೆ.
2007ರ ಫೆಬ್ರವರಿಯಲ್ಲಿ ವೆಸ್ಟ್ಇಂಡೀಸ್ನಲ್ಲಿ ನಡೆದಿದ್ದ ವಿಶ್ವಕಪ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಭಾರತದ ವಿರುದ್ಧ ಗೆಲುವಿಗೆ ಕಾರಣವಾಗುವ ಮೂಲಕ ಬಾಂಗ್ಲಾ ಕ್ರಿಕೆಟ್ ತಂಡಕ್ಕೆ ತಮೀಮ್ ಪಾದಾರ್ಪಣೆ ಮಾಡಿದ್ದರು.
ಏಕದಿನ ಪಂದ್ಯಗಳಲ್ಲಿ 8,313 ರನ್ ಗಳಿಸಿರುವ ತಮೀಮ್, 14 ಶತಕ ಸಿಡಿಸಿದ್ದಾರೆ. ಈಗ ಇರುವ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೊರತುಪಡಿಸಿದರೆ ಏಕದಿನದಲ್ಲಿ ಅತ್ಯಧಿಕ ರನ್ ಗಳಿಸಿರುವ ಮೂರನೇ ಆಟಗಾರ ತಮೀಮ್.
ಟೆಸ್ಟ್ನಲ್ಲಿ 5,134 ರನ್ ಗಳಿಸಿದ್ದಾರೆ. ತಮೀಮ್ ನಾಯಕತ್ವದಲ್ಲಿ 37 ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ 21 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಮುರ್ಷಫ್ ಮೊರ್ತಾಜಾ ಅವರಿಗಿಂತಲೂ ಯಶಸ್ವಿ ನಾಯಕ ಎನ್ನಿಸಿಕೊಂಡಿದ್ದಾರೆ.
ADVERTISEMENT