ಟಾಟಾ ಸಂಸ್ಥೆಯ ಟಾಟಾ ನೆಕ್ಸಾನ್ ಇವಿ ಎಲೆಕ್ಟ್ರಿಕಲ್ ಕಾರು ಬುಧವಾರ ಮುಂಬೈನ ಸಬರ್ಬ್ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಯಾವ ಕಾರಣಕ್ಕೆ ಈ ಎಲೆಕ್ಟ್ರಿಕಲ್ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂಬುದು ವರದಿಯಾಗಲ್ಲ. ಈ ಅಪಘಾತದಲ್ಲಿ ವಾಹನ ಸವಾರ ಹಾಗೂ ಇತರರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಟಾಟಾ ನೆಕ್ಸಾನ್ ಇವಿ ಎಲೆಕ್ಟ್ರಿಕಲ್ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡ ಬಗ್ಗೆ ಟಾಟಾ ಸಂಸ್ಥೆ ವಿಚಾರಣೆಗೆ ಆದೇಶ ನೀಡಿದೆ. ಈ ಕಾರು ಮಾರುಕಟ್ಟೆಗೆ ಬಂದು 2 ವರ್ಷಗಳಾಗಿವೆ ಹಾಗೂ ಸಾವಿರಾರು ಕಾರುಗಳು ಮಾರಾಟವಾದ ನಂತರ ಬೆಂಕಿ ಹೊತ್ತಿಕೊಂಡ ಪ್ರಕರಣ ಇದೇ ಮೊದಲನೆಯದಾಗಿದೆ.
ಮುಂಬೈ ಸಬರ್ಬ್ನ ವಾಸಿಯಲ್ಲಿ ಬುಧವಾರ ಜೂನ್ 22 ರಂದು ಟಾಟಾ ನೆಕ್ಸಾನ್ ಇವಿ ಕಾರಿನ ಬ್ಯಾಟರಿಯಿಂದ ಬೆಂಕಿ ಹೊತ್ತಿಕೊಂಡಿತ್ತು ಎಂದು ಹೇಳಲಾಗಿದೆ. ಬೆಂಕಿಗೆ ಅಹುತಿಯಾದ ಕಾರನ್ನು ಕೇವಲ 2 ತಿಂಗಳುಗಳ ಹಿಂದೆಯಷ್ಟೇ ಖರೀದಿ ಮಾಡಲಾಗಿತ್ತು. ಅತಿ ಹೆಚ್ಚು ಉಷ್ಣಾಂಶ ಅಥವಾ ಮಳೆಯ ವಾತಾವರಣವಿರದ ಸಾಮಾನ್ಯ ವಾತಾವರಣದಲ್ಲಿ ಕಾರಿನ ಬ್ಯಾಟರಿ ಬೆಂಕಿಹೊತ್ತಿಕೊಂಡಿದೆ ಎಂದು ಚಾಲನೆ ಮಾಡುತ್ತಿದ್ದ ಕಾರಿನ ಮಾಲೀಕ ಹೇಳಿದ್ದಾರೆ.
ಟಾಟಾ ಮೋಟರ್ಸ್ನ ವಕ್ತಾರ ಈ ಬಗ್ಗೆ ಹೇಳಿಕೆ ನೀಡಿದ್ದು, ಈ ಪ್ರಕರಣದ ಬಗ್ಗೆ ವಿಸ್ತೃತವಾದ ತನಿಖೆ ನಡೆಸಲಾಗುತ್ತಿದೆ. ನಮ್ಮ ಗ್ರಾಹಕರ ಹಾಗೂ ನಮ್ಮ ವಾಹನದ ಜವಾಬ್ದಾರಿ ನಮ್ಮದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ವರದಿ ಬಂದ ಬಳಿಕ ಹಂಚಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕಲ್ ಕಾರು ಎಂಬ ಹೆಗ್ಗಳಿಕೆಯನ್ನು ಟಾಟಾ ನೆಕ್ಸಾನ್ ಇವಿ ಕಾರು ಹೊಂದಿದೆ. ಈಗಾಗಲೇ 2 ವರ್ಷಗಳಲ್ಲಿ 30 ಸಾವಿರ ವಾಹನಗಳನ್ನು ಮಾರಾಟ ಮಾಡಿದೆ. ಟಾಟಾ ಮೋಟರ್ಸ್ ಸಂಸ್ಥೆಯ ಇಂಜಿನಿಯರಿಂಗ್ ವಿಭಾಗ ಈ ಕಾರನ್ನು ಹೊತ್ತಿಕೊಂಡು ಸಂಪೂರ್ಣ ಪರಿಶೀಲನೆ ನಡೆಸಲಿದೆ. ಆ ಬಳಿಕವಷ್ಟೇ ಕಾರು ಬೆಂಕಿ ಹೊತ್ತಿಕೊಂಡ ಕಾರಣದ ಬಗ್ಗೆ ತಿಳಿದ ಬರಲಿದೆ.
ಟಾಟಾ ನೆಕ್ಸಾನ್ ಇವಿ ವಾಹನ ಭಾರತದ ಯಶಸ್ವಿ ಎಲೆಕ್ಟ್ರಿಕಲ್ ಕಾರ್ ಮಾಡೆಲ್ ಆಗಿದೆ. ಮಾರುಕಟ್ಟೆಗೆ ಬಂದ ಮೊದಲ ವರ್ಷದಲ್ಲಿಯೇ 10 ಸಾವಿರ ಕಾರುಗಳು ಮಾರಾಟವಾಗಿವೆ. ಪ್ರತಿ ತಿಂಗಳಿಗೂ 2,000-2,500 ಕಾರುಗಳು ಮಾರಾಟವಾಗುತ್ತಿವೆ.