2014-15ನೇ ಸಾಲಿನ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿ (Teachers Recruitment Scam) ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕ ಎಂ.ಪಿ. ಮಾದೇಗೌಡ ಹಾಗೂ ಸಮಗ್ರ ಶಿಕ್ಷಣ ಅಭಿಯಾನ ನಿರ್ದೇಶಕಿ ಗೀತಾ ಸೇರಿದಂತೆ ಆರು ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಅಕ್ಟೋಬರ್ 1ರ ವರೆಗೆ ಕಸ್ಟಡಿಗೆ ಪಡೆದಿದ್ದಾರೆ.
ಮಾದೇಗೌಡ, ಗೀತಾ, ನಿವೃತ್ತ ಜಂಟಿ ನಿರ್ದೇಶಕರಾದ ಡಿ.ಕೆ. ಶಿವಕುಮಾರ್, ಕೆ. ರತ್ನಯ್ಯ, ಜಿ.ಆರ್. ಬಸವರಾಜ್ ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್ ನರಸಿಂಹರಾವ್ ಅವರನ್ನು ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದಡಿ ಬಂಧಿಸಲಾಗಿದೆ ಎಂದು ಸಿಐಡಿ ಮೂಲಗಳು ಹೇಳಿವೆ.
ರಾಜ್ಯದ ಬಹುತೇಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ನೇಮಕಾತಿಯಲ್ಲಿ ಅಕ್ರಮ ಕುರಿತು ವಿಧಾನಸೌಧ ಠಾಣೆಯಲ್ಲಿ ದಾಖಲಾಗಿದ್ದ ಮೂರು ಪ್ರತ್ಯೇಕ ಪ್ರಕರಣಗಳ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : Teachers Recruitment Scam : 10 ಜನ ಶಿಕ್ಷಕರ ಬಂಧನ
ಸಹ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಎಫ್ಡಿಎ ಕೆ.ಎಂ. ಪ್ರಸಾದ್ ಅವರನ್ನು ಬಂಧಿಸಿದ್ದ ಸಿಐಡಿ ಅಧಿಕಾರಿಗಳು, ಅವರೆಲ್ಲರ ಹೇಳಿಕೆ ದಾಖಲಿಸಿಕೊಂಡಿದ್ದರು. ಇಲಾಖೆಯ ಉನ್ನತ ಅಧಿಕಾರಿಗಳೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಅವರೇ ತರಾತುರಿಯಲ್ಲಿ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಕೊಟ್ಟಿದ್ದರು ಎಂಬುದಾಗಿ ಬಂಧಿತರು ಬಾಯ್ಬಿಟ್ಟಿದ್ದರೆಂದು ಸಿಐಡಿ ಮೂಲಗಳು ಹೇಳಿವೆ.
ಜಿಲ್ಲಾವಾರು ಅರ್ಜಿ ಸಲ್ಲಿಸಿದ್ದ ಕೆಲ ಅಭ್ಯರ್ಥಿಗಳು, ನೇಮಕಾತಿ ಮಂಡಳಿಯಲ್ಲಿದ್ದ ಸಿಬ್ಬಂದಿ ಹಾಗೂ ಇತರರಿಗೆ 5 ಲಕ್ಷದಿಂದ 10 ಲಕ್ಷ ರೂ. ನೀಡಿ ಸಹ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿದ್ದರು. ಇವರೆಲ್ಲರ ಹೆಸರು ಹೆಚ್ಚುವರಿ ಪಟ್ಟಿಯಲ್ಲಿತ್ತು. ಅಕ್ರಮವಾಗಿ ಆಯ್ಕೆಯಾಗಿದ್ದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸದೇ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರು, ನೇಮಕಾತಿ ಆದೇಶ ಪತ್ರಗಳನ್ನು ನೀಡಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಶಿಕ್ಷಕರ ನೇಮಕಾತಿ ಅಕ್ರಮ (Teachers Recruitment Scam) ತನಿಖೆ ಪ್ರಗತಿಯಲ್ಲಿದ್ದು, ಮತ್ತಷ್ಟು ವಿಚಾರಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಸಿಯಡಿ ಅಧಿಕಾರಿಗಳು ತಿಳಿಸಿದ್ದಾರೆ.