ತಾಂತ್ರಿಕ ದೋಷದಿಂದಾಗಿ ಭಾರತದ ಮತ್ತೊಂದು ಪ್ರಯಾಣಿಕ ವಿಮಾನ ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಭಾನುವಾರ ನಡೆದಿದೆ.
ಶಾರ್ಜಾದಿಂದ ಹೈದರಾಬಾದ್ಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷವಿದೆ ಎಂದು ಪೈಲಟ್ ವರದಿ ಮಾಡಿದ ಹಿನ್ನೆಲೆಯಲ್ಲಿ, ವಿಮಾನ ಇಂದು ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ವಿಮಾನವು ಕರಾಚಿಯಲ್ಲಿ ಮುನ್ನೆಚ್ಚರಿಕೆಯಾಗಿ ಲ್ಯಾಂಡಿಂಗ್ ಮಾಡಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಪ್ರಯಾಣಿಕರನ್ನು ಹೈದರಾಬಾದ್ಗೆ ಕರೆತರಲು ಕರಾಚಿಗೆ ಹೆಚ್ಚುವರಿ ವಿಮಾನವನ್ನು ಕಳುಹಿಸಲಾಗುವುದು ಎಂದು ಭಾರತೀಯ ವಿಮಾನ ಸಂಸ್ಥೆ ಇಂಡಿಗೋ ಹೇಳಿದೆ.
ಇಂಡಿಗೋ ವಿಮಾನ 6E-1406 ಶಾರ್ಜಾದಿಂದ ಹೈದರಾಬಾದ್ ಟೇಕ್ ಆಫ್ ಆಗಿತ್ತು. ಆದರೆ ಮಾರ್ಗ ಮಧ್ಯೆ ತಾಂತ್ರಿಕದೋಷ ಕಂಡುಬಂದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ಪಾಕಿಸ್ತಾನದ ಕರಾಚಿಗೆ ತಿರುಗಿಸಲಾಯಿತು. ಹೆಚ್ಚುವರಿ ವಿಮಾನವನ್ನು ಕರಾಚಿಗೆ ಕಳುಹಿಸಲಾಗುತ್ತಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಎರಡು ವಾರಗಳಲ್ಲಿ ಕರಾಚಿಯಲ್ಲಿ ಅನಪೇಕ್ಷಿತ ಲ್ಯಾಂಡಿಂಗ್ ಮಾಡಿದ ಎರಡನೇ ಭಾರತೀಯ ವಿಮಾನಯಾನ ಇದಾಗಿದೆ. ಈ ತಿಂಗಳ ಆರಂಭದಲ್ಲಿ ದೆಹಲಿಯಿಂದ ದುಬೈಗೆ ಹೊರಟಿದ್ದ ಸ್ಪೈಸ್ಜೆಟ್ ವಿಮಾನವನ್ನು ಕಾಕ್ಪಿಟ್ನಲ್ಲಿ ಇಂಧನ ಸೂಚಕ ಲೈಟ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಕಾರಣ ಪಾಕಿಸ್ತಾನದ ಕರಾಚಿಯಲ್ಲಿ ಲ್ಯಾಂಡಿಂಗ್ ಮಾಡಲಾಗಿತ್ತು.