ತೆಲಂಗಾಣ ಸರ್ಕಾರವು (Telangana Government) ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಪರಿಶಿಷ್ಟ ಪಂಗಡಗಳಿಗೆ (ಎಸ್ಟಿ) ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು (ST Reservation Hike) ಶೇ. 4ರಷ್ಟು ಹೆಚ್ಚಿಸುವ ಮೂಲಕ ಅಸ್ತಿತ್ವದಲ್ಲಿರುವ ಶೇ.6 ರಿಂದ ಶೇ.10 ಕ್ಕೆ ಹೆಚ್ಚಿಸಿದೆ.
ಹೆಚ್ಚಳದ ಕುರಿತು ತೆಲಂಗಾಣ ರಾಜ್ಯ ಅಸೆಂಬ್ಲಿ ಅಂಗೀಕರಿಸಿದ ಮಸೂದೆಯನ್ನು ಕೇಂದ್ರವು ಸ್ಥಗಿತಗೊಳಿಸಿತ್ತು. ಇದರಿಂದಾಗಿ ರಾಜ್ಯ ಸರ್ಕಾರ ಎಸ್ಟಿ ಸಮುದಾಯಕ್ಕೆ ಮೀಸಲಾತಿಯನ್ನು ಹೆಚ್ಚಿಸಲು ಅಧಿಕೃತ ಆದೇಶ ಮಾಡಿದೆ.
ಈ ಮಸೂದೆಯನ್ನು ಆರು ವರ್ಷಗಳ ಹಿಂದೆ ವಿಧಾನಸಭೆ ಅಂಗೀಕರಿಸಿ ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕೇಂದ್ರಕ್ಕೆ ಕಳುಹಿಸಲಾಗಿತ್ತು.
ಎಸ್ಟಿ ಸಮುದಾಯಕ್ಕೆ ಈಗ ಹೆಚ್ಚುವರಿ ಶೇ.4 ರಷ್ಟು ಮೀಸಲಾತಿಯೊಂದಿಗೆ, ರಾಜ್ಯದಲ್ಲಿ ಒಟ್ಟಾರೆ ಮೀಸಲಾತಿ ಕೋಟಾವು ಶೇ.52 ಆಗಲಿದೆ. ಸುಪ್ರೀಂಕೋರ್ಟ್ನಿಂದ ಅನುಮತಿಸಲಾದ ಶೇ.50 ಕ್ಕಿಂತ 2 ಪ್ರತಿಶತ ಮೀಸಲಾತಿ ಹೆಚ್ಚಳವಾಗಲಿದೆ.
ತೆಲಂಗಾಣದಲ್ಲಿ ಎಸ್ಟಿ ಸಮುದಾಯದ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಕಳೆದ ಚುನಾವಣೆಯಲ್ಲಿ ಮೀಸಲಾತಿ ಹೆಚ್ಚಿಸುವ (ST Reservation Hike) ಭರವಸೆಯನ್ನು ಟಿಆರ್ಎಸ್ ಪಕ್ಷ ನೀಡಿತ್ತು.
ಇದನ್ನೂ ಓದಿ : ಮೀಸಲಾತಿ ಹೆಚ್ಚಳಕ್ಕಾಗಿ ವಾಲ್ಮೀಕಿ ಸ್ವಾಮೀಜಿ ನಿರಶನ – ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ
ಕರ್ನಾಟಕದಲ್ಲಿಯೂ ನಡೆಯುತ್ತಿದೆ ಹೋರಾಟ :
ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಕರ್ನಾಟಕದಲ್ಲಿಯೂ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಬೇಕೆಂಬ ಹೋರಾಟ, ಪ್ರತಿಭಟನೆ ನಡೆಯುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಎಸ್ಟಿ ಸಮುದಾಯಕ್ಕೆ ಶೇ 3.5 ರಷ್ಟು ಮೀಸಲಾತಿ ಇದೆ. ಈ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ 7 ಕ್ಕೆ ಹೆಚ್ಚಿಸಬೇಕೆಂದು ಒತ್ತಾಯ ಮಾಡಲಾಗುತ್ತಿದೆ. ಪ್ರಸನ್ನಾನಂದಪುರಿ ಸ್ವಾಮೀಜಿಗಳು ನಿರಂತರವಾಗಿ ಕಳೆದ 8 ತಿಂಗಳುಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯ ಸರ್ಕಾರದಿಂದ ಭರವಸೆ :
ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಬಸವಾರಜ ಬೊಮ್ಮಾಯಿಯವರು ಸ್ವಾಮೀಜಿಗಳಿಗೆ ಭರವಸೆ ನೀಡಿದ್ದಾರೆ. ಅಲ್ಲದೇ, ಮುಂಗಾರು ಅಧಿವೇಶನದಲ್ಲಿಯೂ ಈ ಬಗ್ಗೆ ಮತ್ತೊಮ್ಮೆ ಚರ್ಚಿಸಿ ಭರವಸೆ ನೀಡಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಎಸ್ಟಿ ಸಮುದಾಯ ದೊಡ್ಡ ಪ್ರಮಾಣದಲ್ಲಿದೆ. ಈ ಭಾಗದ ಪ್ರಭಾವಿ ನಾಯಕರಾದ ಶ್ರೀ ರಾಮುಲು ಅವರು ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುತ್ತೇವೆ ಎಂಬ ಭರವಸೆ ನೀಡಿದ್ದರು. ಇತ್ತೀಚೆಗೆ, ಅವರು ಮಾತನಾಡುತ್ತಾ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇತರೆ ಸಮುದಾಯಗಳಿಂದಲೂ ಪ್ರತಿಭಟನೆ :
ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯ ತಮ್ಮನ್ನು 3ಬಿ ಇಂದ 3ಎ ಮೀಸಲಾತಿ ನೀಡುವಂತೆ ಪ್ರತಿಭಟನೆ ನಡೆಸುತ್ತಿದೆ. ಕುರುಬ ಸಮುದಾಯ 2ಎ ಇಂದ ಎಸ್ಟಿ ಮೀಸಲಾತಿ ನೀಡುವಂತೆ ಪ್ರತಿಭಟನೆ ನಡೆಸುತ್ತಿದೆ. ರಾಜ್ಯ ಸರ್ಕಾರ ಈ ಎಲ್ಲಾ ಸಮುದಾಯಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಕುಲ ಶಾಸ್ತ್ರೀಯ ಅಧ್ಯಯನವನ್ನು ಈಗಾಗಲೇ ಮಾಡಿಸಿದೆ.
ಇದನ್ನೂ ಓದಿ : ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಸರ್ವಪಕ್ಷಗಳ ಸಭೆ : ಸಿಎಂ ಬೊಮ್ಮಾಯಿ