ಉತ್ತರಪ್ರದೇಶ ಎಂಬ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಬುಲ್ಡೋಜರ್ ಭಯಕ್ಕೆ ಪಾತಕಿಗಳು ಮಾತ್ರವಲ್ಲ ಜನ ಕೂಡಾ ಬೆಚ್ಚಿ ಬೀಳುತ್ತಾರೆ. ಆದರೇ, ಯೋಗಿ ಸರ್ಕಾರದ ಮೂಗಿನದಿಯಲ್ಲಿಯೇ ಬರುವ ಇಂಧನ ಇಲಾಖೆಯ ಕಚೇರಿಯೊಂದರಲ್ಲಿ ಜಗತ್ತಿಗೆ ಕಂಟಕವಾಗಿದ್ದ ಅಲ್ ಖೈದಾ ಉಗ್ರ ಒಸಾಮಾ ಬಿನ್ ಲಾಡೆನ್ ಗೆ ಪೂಜನೀಯ ಸ್ಥಾನ ಸಿಕ್ಕಿದೆ. ಉಗ್ರನ ಫೋಟೋ ಅಳವಡಿಸಿ ‘ಗೌರವಾನ್ವಿತ ಒಸಾಮಾ ಬಿನ್ ಲಾಡೆನ್.. ಜಗತ್ತಿನ ಸರ್ವಶ್ರೇಷ್ಠ ಕಿರಿಯ ಎಂಜಿನಿಯರ್ ಎಂಬ ಒಕ್ಕಣೆ ಬೇರೆ ಬರೆಯಲಾಗಿದೆ.
ಲಖ್ನೋದಿಂದ 250 ಕಿಲೋಮೀಟರ್ ದೂರದಲ್ಲಿರುವ ಫರುಕ್ಕಾಬಾದ್ ಜಿಲ್ಲೆಯ ನವಾಬ್ ಗಂಜ್ ನಲ್ಲಿರುವ ವಿದ್ಯುತ್ ಇಲಾಖೆ ಕಚೇರಿಯಲ್ಲಿ ಉಪ ವಿಭಾಗಿಯ ಅಧಿಕಾರಿ ಆಗಿರುವ ರವೀಂದ್ರ ಪ್ರಕಾಶ್ ಗೌತಮ್ ಎಂಬುವವರು ಒಸಾಮಾ ಬಿನ್ ಲಾಡೆನ್ ಪರಮ ಅಭಿಮಾನಿ ಆಗಿದ್ದು, ಕುಖ್ಯಾತ ಭಯೋತ್ಪಾದಕನನ್ನು ತಮ್ಮ ಗುರು ಎಂದು ಪರಿಗಣಿಸಿ, ಕಚೇರಿಯಲ್ಲೇ ಫೋಟೋ ಅಳವಡಿಸಿ ಪೂಜಿಸುತ್ತಾ ಇದ್ದಾರೆ.
ಇದು ಕಚೇರಿಯ ಅಧಿಕಾರಿಗಳ ಒಳ ಜಗಳದ ಪರಿಣಾಮ ಈಗ ಬಯಲಾಗಿದೆ. ಕೂಡಲೇ ಪೊಲೀಸ್ ಅಧಿಕಾರಿಗಳು ಲಾಡೆನ್ ಫೋಟೋವನ್ನು ಕಚೇರಿಯಿಂದ ತೆಗೆಸಿದ್ದಾರೆ. ಲಾಡೆನ್ ಆರಾಧಕ ರವೀಂದ್ರ ಪ್ರಕಾಶ್ ಗೌತಮ್ ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಉನ್ನತ ಮಟ್ಟದ ತನಿಖೆಗೆ ತಂಡವನ್ನು ರಚಿಸಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.
ಲಾಡೆನ್ ಆರಾಧಕ ರವೀಂದ್ರ ಪ್ರಕಾಶ್ ಗೌತಮ್ ಗೆ ತಮ್ಮ ಕೃತ್ಯದ ಬಗ್ಗೆ ಎಳ್ಳಷ್ಟು ಪಶ್ಚತ್ತಾಪವಾಗಲಿ, ತಾನು ಮಾಡಿರುವುದು ತಪ್ಪು ಎಂದು ಭಾವಿಸಿಲ್ಲ. ಬದಲಿಗೆ ನೀವು ಈ ಫೋಟೋ ತೆಗೆದರೆ ಏನಂತೆ, ನನ್ನ ಬಳಿ ಇನ್ನಷ್ಟು ಲಾಡೆನ್ ಫೋಟೋ ಇದೆ ಅಳವಡಿಸುತ್ತೇನೆ ಎಂದು ಹೇಳುತ್ತಿದ್ದಾರಂತೆ.
ಈ ವಿಚಾರ ಈಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿವಿಗೆ ಬಿದ್ದಿದೆ. ಈ ಪ್ರಕರಣದಲ್ಲಿ ಅವರೇನು ಮಾಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.