ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಮರುಪರಿಷ್ಕರಣ ಸಮಿತಿಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಈ ಸಮಿತಿಯ ಪಠ್ಯ ಈಗಾಗಲೇ ವಿವಾದದ ಕೇಂದ್ರಬಿಂದುವಾಗಿ ರೂಪುಗೊಂಡಿದೆ. ಈ ಸಮಿತಿಯನ್ನು ವಿಸರ್ಜಿಸಬೇಕು ಎಂದು ಚಿಂತಕರ ವಲಯ ಸರ್ಕಾರಕ್ಕೆ ಒತ್ತಾಯಿಸಿದೆ.
ಪಠ್ಯ ಪುಸ್ತಕದ ಪರಿಷ್ಕರಣೆಗೆ ಸಂಬಂಧಿಸಿ ಉಂಟಾಗುತ್ತಿರುವ ವಿವಾದದವನ್ನು ವಿರೋಧಿಸಿ ಸಾಹಿತಿ ಮೂಡ್ನಕೂಡು ಚಿನ್ನಸ್ವಾಮಿ ಹಾಗೂ ಈರಪ್ಪ ಎಂ ಕಂಬಳಿ ಅವರು ಬರೆದಿರುವ ಪ್ರಬಂಧ ಹಾಗೂ ಕವಿತೆಯನ್ನು ಪ್ರಕಟಿಸಲು ಅನುಮತಿಯನ್ನು ವಾಪಸ್ ಪಡೆದುಕೊಂಡಿದ್ದಾರೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕದ ಪರಿಷ್ಕರಣೆಯನ್ನು ಅನೇಕ ಲೇಖಕರು ಸಾಹಿತಿಗಳು ಸೇರಿದಂತೆ ಗಣ್ಯರು ವಿರೋಧಿಸಿದ್ದರು. ಅಷ್ಟೇ ಅಲ್ಲದೇ ಕುವೆಂಪು ಹಾಗೂ ಬಸವಣ್ಣನರ ತತ್ವಕ್ಕೆ ಅಪಚಾರವಾಗುವಂಥ ಕೆಲಸ ನಡೆಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ತಮ್ಮ ಪ್ರಬಂಧ ಹಾಗೂ ಕವಿತೆಯನ್ನು ಅನೇಕರು ಹಿಂಪಡೆದಿದ್ದಾರೆ. ಇದೀಗ ಆ ಸಾಲಿಗೆ ಮತ್ತಿಬ್ಬರು ಸಾಹಿತಿಗಳು ಸೇರಿಕೊಂಡಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಈರಪ್ಪ ಎಂ ಕಂಬಳಿ ಅವರು, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಕಳೆದ ಸಾಲಿನಲ್ಲಿ ಹತ್ತನೆ ತರಗತಿಯ ನುಡಿ- ಕನ್ನಡ ತೃತೀಯ ಭಾಷಾ ಕನ್ನಡ ಪಠ್ಯಪುಸ್ತಕದಲ್ಲಿರುವ ಪ್ರಬಂಧವನ್ನು ಮುಂದುವರಿಸಬಾರದು ಎಂದು ಮನವಿ ಮಾಡಿದ್ದಾರೆ.
ಅದೇ ರೀತಿ ಮೂಡ್ನಕೂಡು ಚಿನ್ನಸ್ವಾಮಿ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಐದನೇ ತರಗತಿಗೆ ಪಠ್ಯವಾಗಿರುವ ನನ್ನ ಕವಿತೆಯನ್ನು ಪ್ರಕಟಿಸಲು ಅನುಮತಿ ನೀಡಿದ್ದನ್ನು ಹಿಂತೆಗೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿರೋಧಿಸಿ ಜಿ.ರಾಮಕೃಷ್ಣ ಹಾಗೂ ದೇವನೂರ ಮಹದೇವ, ಎಸ್ಜಿ ಸಿದ್ದರಾಮಯ್ಯ ಅವರು ತಾವು ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿದ್ದರು.