ಶ್ರೀಲಂಕಾ ಆರ್ಥಿಕ ಸ್ಥಿತಿ ಮತ್ತಷ್ಟು ಉಲ್ಪಣಗೊಂಡಿದ್ದು, ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆಯೇ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಇದ್ದಕ್ಕಿದ್ದಂತೆ ತುರ್ತು ಪರಿಸ್ಥಿತಿ ನಿಯಮವನ್ನು ವಾಪಸ್ ಪಡೆದಿದ್ದಾರೆ.
ಇದರಿಂದಾಗಿ ಶ್ರೀಲಂಕಾಗೆ ಅಗತ್ಯವಾಗಿ ಬೇಕಾಗಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹಣಕಾಸು ಪರಿಹಾರ ಪ್ಯಾಕೇಜಿಗೆ ಒಪ್ಪಿಗೆ ಸೂಚಿಸುವ ಪ್ರಕ್ರಿಯೆ ಮತ್ತಷ್ಟು ಕಠಿಣವಾದಂತಾಗಿದೆ. ಎ.1 ರಿಂದ ಜಾರಿಯಾಗುವಂತೆ ಅಧ್ಯಕ್ಷರ ಆದೇಶವನ್ನು ಎ.5 ರ ಮಧ್ಯರಾತ್ರಿಯಿಂದ ಜಾರಿಯಾಗುವಂತೆ ರದ್ದುಪಡಿಸಲಾಗಿದೆ. ಮಂಗಳವಾರ ತಡರಾತ್ರಿ ಈ ಸಂಬಂಧ ವಿಶೇಷ ಗಜೆಟ್ ಅಧಿಸೂಚನೆ ಹೊರಡಿಸಲಾಗಿದೆ.
ತುರ್ತು ಪರಿಸ್ಥಿತಿ ಘೋಷಣೆ ಮೂಲಕ, ಪ್ರತಿಭಟನಾಕಾರರನ್ನು ಬಂಧಿಸುವ, ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಅಧಿಕಾರ ಸೇರಿದಂತೆ ಹಲವು ಅಧಿಕಾರಗಳು ಅಧ್ಯಕ್ಷರಿಗೆ ಲಭ್ಯವಾಗಿದ್ದವು. ಆದರೆ ಅಧ್ಯಕ್ಷರ ಪದತ್ಯಾಗಕ್ಕೆ ಹಲವು ಮಂದಿ ಸಂಸದರಿಂದ ಆಗ್ರಹಗಳು ಕೇಳಿ ಬಂದಿದ್ದವು.
ಆಡಳಿತಾರೂಢ ಮೈತ್ರಿಕೂಟದ ಹನ್ನೊಂದು ಪಕ್ಷಗಳು ಮಂಗಳವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿ, ತಾವು ಸ್ವತಂತ್ರ ಸಂಸದರಾಗಿ ಕಾರ್ಯ ನಿರ್ವಹಿಸುವುದಾಗಿ ಪ್ರಕಟಿಸಿದ್ದರು. ಜತೆಗೆ ರಾಜಪಕ್ಸ ಪಕ್ಷದ ಕೆಲ ಸಂಸದರು ಕೂಡಾ ಸರ್ಕಾರದಿಂದ ಅಂತರ ಕಾಯ್ದುಕೊಳ್ಳುವುದಾಗಿ ಹೇಳಿದ್ದರು. ಇದರಿಂದಾಗಿ 225 ಸ್ಥಾನಗಳ ಸಂಸತ್ತಿನಲ್ಲಿ ಸರ್ಕಾರಕ್ಕೆ ಇರುವ ಸರಳ ಬಹುಮತದ ಬಗ್ಗೆ ಸಂದೇಹ ಮೂಡಿತ್ತು.
ಹಣಕಾಸು ಸಚಿವ ಸೇರಿದಂತೆ ಹಲವು ಮಂದಿ ಸಂಪುಟ ಸಹೋದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಐಎಂಎಫ್ ನೆರವು ಪಡೆಯುವ ಸಂಬಂಧ ಸಾಲ ಮರು ಹೊಂದಾಣಿಕೆ ಮಾತುಕತೆಗೆ ತಡೆ ಉಂಟಾಗಿದೆ.
https://youtu.be/h7I0nH5ZadI