ಬಿಜೆಪಿ ಹಾಗೂ ಅವರ ದೊಡ್ಡ ಪರಿವಾರದವರು ಅನೇಕ ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಿದ್ದಾರೆ. ಒಂದು ಕಡೆ ಬೆಲೆ ಏರಿಕೆ ಹೆಚ್ಚಾಗುತ್ತಿದೆ. ಪಂಚ ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಸುಮ್ಮನಿದ್ದ ಬಿಜೆಪಿ ನಂತರ ಬೆಲೆ ಏರಿಕೆ ಮಾಡುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ 8 ರೂ. ಹೆಚ್ಚಾಗಿದೆ. ಅಡುಗೆ ಎಣ್ಣೆ ಸುಮಾರು 200 ರೂ. ಆಗಿದೆ. ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದ್ದು, ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಗುತ್ತಿಗೆದಾರರ ಸಂಘ ಹೋರಾಟ ಮಾಡುತ್ತಿದೆ.
ಇದೆಲ್ಲವನ್ನು ಮರೆ ಮಾಚಲು, ಹಿಜಾಬ್, ಜಾತ್ರೆಯಲ್ಲಿ ಮುಸಲ್ಮಾನ ವ್ಯಾಪಿಗಳಿಗೆ ನಿಷೇಧ, ಹಲಾಲ್ ಕಟ್ ವಿಚಾರ ತೆಗೆದಿದ್ದು, ಈಗ ಮಸೀದಿಗಳ ಮೇಲಿನ ಧ್ವನಿವರ್ಧಕ ವಿಚಾರವನ್ನು ಎತ್ತಿದ್ದಾರೆ. ಇದು ಇಂದು ನಿನ್ನೆಯ ಉದ್ಭವಿಸಿರುವ ವಿಚಾರವಲ್ಲ. ಬಹಳ ಹಿಂದೆಯೇ ಚರ್ಚೆಗೆ ಬಂದಿದೆ. ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು, ಸುಪ್ರೀಂ ಕೋರ್ಟ ತೀರ್ಪು ಕೊಟ್ಟ ನಂತರ ಮಾಲಿನ್ಯ ನಿಯಂತ್ರಣ ಮಂಡಳಿಯು ಧ್ವನಿವರ್ಧಕಗಳ ಶಬ್ಧದ ಪ್ರಮಾಣಕ್ಕೆ ಮಿತಿ ಹೇರಿ ಆದೇಶ ಹೊರಡಿಸಿದೆ. ಅದರ ಪ್ರಕಾರ ಕೈಗಾರಿಕಾ ಪ್ರದೇಶಗಳಲ್ಲಿ ಮಸೀದಿ ಇದ್ದರೆ ಹಗಲು ವೇಳೆ 75 ಡಿಸೆಬಲ್ ವರೆಗೂ ರಾತ್ರಿ ವೇಳೆ 70ರಷ್ಟು ಇಡಬಹುದು. ವಾಣಿಜ್ಯ ಪ್ರದೇಶಗಳಲ್ಲಿ ಹಗಲು ವೇಳೆ 65 ಹಾಗೂ ರಾತ್ರಿ 55ರ ಪ್ರಮಾಣದಲ್ಲಿ ಇಡಬಹುದು. ವಸತಿ ಪ್ರದೇಶಗಳಲ್ಲಿ ಹಗಲು ವೇಳೆ 55 ಹಾಗೂ ರಾತ್ರಿ ವೇಳೆ 45ರಷ್ಟು, ಆಸ್ಪತ್ರೆಗಳಿರುವ ನಿಶ್ಯಬ್ಧ ಪ್ರದೇಶಗಳಲ್ಲಿ ಬೆಳಗ್ಗೆ ವೇಳೆ 50 ಹಾಗೂ ರಾತ್ರಿ ವೇಳೆ 40ರಷ್ಟು ಡಿಸೆಬಲ್ ನಷ್ಟು ಧ್ವನಿವರ್ಧಕ ಹಾಕಬಹುದು ಎಂದು ನಮ್ಮ ಸರ್ಕಾರವೇ ಆದೇಶ ಹೊರಡಿಸಿತ್ತು.
ಇದು ಕೇವಲ ಮಸೀದಿಗಳಿಗೆ ಮಾತ್ರವಲ್ಲ ಸಭೆ, ಸಮಾರಂಭಗಳಲ್ಲಿ ಯಾರಿಗೂ ತೊಂದರೆ ಆಗಬಾರದು ಎಂದು ಕ್ರಮ. ಈ ಮಾನದಂಡದ ಅಡಿಯಲ್ಲಿ ಧ್ವನಿವರ್ಧಕ ಹಾಕಲು ಕಾನೂನಿನ ಅಡಿಯಲ್ಲಿ ಅವಕಾಶ ನೀಡಿದ್ದು, ಇದನ್ನು ಉಲ್ಲಂಘನೆ ಮಾಡಿದರೆ ಕಾನೂನು ಪ್ರಕಾರವಾಗಿ ಕ್ರಮ ಕೈಗೊಳ್ಳಲಿ. ಈ ಹಿಂದೆ ಅನೇಕರಿಗೆ ಇಂತಹ ವಿಚಾರವಾಗಿ ನೋಟೀಸ್ ನೀಡಲಾಗಿದೆ. ಈಗ ಬಹುತೇಕ ಕಡೆಗಳಲ್ಲಿ ಮೈಕ್ ಗಳಿಗೆ ಈ ಪ್ರಮಾಣದಲ್ಲಿ ಶಬ್ಧ ಹೆಚ್ಚಾಗಿ ಬಾರದಂತೆ ಮಾಡಲಾಗಿದೆ.
ಕೆಲವರು ರಾಜಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯೇ ಮಾನದಂಡ ವಿಧಿಸಿ ಅನುಮತಿ ನೀಡಿದೆ. ಬಿಜೆಪಿಯವರು ಸಂವಿಧಾನಕ್ಕಿಂತ ದೊಡ್ಡವರಾಗಿದ್ದರೆ ಅವರು ಹೇಳಿದಂತೆ ಕೇಳಬೇಕಾಗುತ್ತದೆ. ಬಿಜೆಪಿಯವರು ಕೇವಲ ಇಲ್ಲಿಗೆ ನಿಲ್ಲಿಸುವುದಿಲ್ಲ. ಇಂತಹ ಇನ್ನು ಅನೇಕ ಭಾವನಾತ್ಮಕ ವಿಚಾರಗಳನ್ನು ಹುಡುಕಿ ಚರ್ಚೆಗೆ ತರುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಇಂತಹ ಪ್ರಯತ್ನಗಳು ಮುಂದುವರಿಯಲಿವೆ ಎಂದು ಹೇಳಿದ್ದಾರೆ.
https://youtu.be/4Yl2BhFmhuc